ಬಸವಣ್ಣ   
  ವಚನ - 1346     
 
ಲೋಕಾದಿ ಲೋಕಂಗಳೆಲ್ಲಾ ಚೆನ್ನಯ್ಯನ ಮಕ್ಕಳು, ಬ್ರಹ್ಮವಿಷ್ಣುರುದ್ರರೆಲ್ಲಾ ಚೆನ್ನಯ್ಯನ ಮಕ್ಕಳು, ಸನಕ ಸನಂದ ಸನಾದಿಗಳೆಲ್ಲಾ ಚೆನ್ನಯ್ಯನ ಮಕ್ಕಳು, ಕಿನ್ನರ ಕಿಂಪುರುಷರೆಲ್ಲಾ ಚೆನ್ನಯ್ಯನ ಮಕ್ಕಳು, ಗರುಡ ಗಾಂಧರ್ವರೆಲ್ಲಾ ಚೆನ್ನಯ್ಯನ ಮಕ್ಕಳು, ಸಿದ್ಧವಿದ್ಯಾಧರರುಗಳೆಲ್ಲಾ ಚೆನ್ನಯ್ಯನ ಮಕ್ಕಳು, ಏಕಾದಶರುದ್ರರು ದ್ವಾದಶಾದಿತ್ಯರು ಚೆನ್ನಯ್ಯನ ಮಕ್ಕಳು, ನವಬ್ರಹ್ಮರು ಚೆನ್ನಯ್ಯನ ಮಕ್ಕಳು, ತ್ರೈತ್ರಿಂಶಕೋಟಿ ದೇವತೆಗಳೆಲ್ಲಾ ಚೆನ್ನಯ್ಯನ ಮಕ್ಕಳು, ಅಂತರಂತರ ಸಂತರೆಲ್ಲಾ ಚೆನ್ನಯ್ಯನ ಮಕ್ಕಳು, ಭಾವ ಭಾಳೇಕ್ಷಣರೆಲ್ಲಾ ಚೆನ್ನಯ್ಯನ ಮಕ್ಕಳು. ನನ್ನ ನಿನ್ನಂತಹವರೆಲ್ಲಾ ಚೆನ್ನಯ್ಯನ ಮಕ್ಕಳು. ಆಣೆ, ನಿಮ್ಮಾಣೆ, ಕೂಡಲಸಂಗಮದೇವಾ.