ಬಸವಣ್ಣ   
  ವಚನ - 1375     
 
ಸದ್ಭಕ್ತಂಗೆಯೂ ಜಂಗಮಕ್ಕೆಯೂ ಭಾಜನ ಬೇರೆಂಬ ಶಾಸ್ತ್ರದ ಸದಗರು ನೀವು ಕೇಳಿರೋ. ಭಕ್ತದೇಹಿಕ ದೇವನೆಂದು ಶ್ರುತಿ ಸಾರುತ್ತಿವೆ, ಅರಿದು ಮರೆಯದಿರಿ, ಮರವೆಯಿಂದ ಬ್ರಹ್ಮ ಶಿರವ ಹೋಗಾಡಿಕೊಂಡ, ಮರವೆಯಿಂದ ದಕ್ಷ ಶಿರವ ನೀಗಿ ಕುರಿದಲೆಯಾದುದನರಿಯಿರೆ? ಮರೆಯದೆ ವಿಚಾರಿಸಿ ನೋಡಿ, ಭಕ್ತಂಗೂ ಲಿಂಗಕ್ಕೂ ಭಿನ್ನವಿಲ್ಲ. ಇನ್ನು ಆ ಭಕ್ತಂಗೆಯೂ ಆ ಜಂಗಮಕ್ಕೆಯೂ ಭೇದವಿಲ್ಲ. ಬೇರ್ಪಡಿಸಿ ನುಡಿಯಲುಂಟೆ? ಇನ್ನು ಆ ಗುರುವಿಂಗೆಯೂ ಆ ಭಕ್ತಂಗೆಯೂ ಸಂಕಲ್ಪವಿಲ್ಲ. ಅದೆಂತೆಂಡೆ: ಮೆಟ್ಟುವ ರಕ್ಷೆ, ಮುಟ್ಟುವ ಯೋನಿ, ಅಶನ ಶಯನ, ಸಂಯೋಗ, ಮಜ್ಜನ, ಬೋಜನ, ಇಂತಿವನು ಗುರುಲಿಂಗಜಂಗಮ ಸಹಿತವಾಗಿ ಭೋಗಿಸುವ ಸದ್ಭಕ್ತಂಗೆ ನಾನು ನಮೋ ನಮೋ ಎಂಬೆನು. ಅದೆಂತೆಂಡೆ: ʼಅರ್ಥಪ್ರಾಣಾಭಿಮಾನಂ ಚ ಗುರೌ ಲಿಂಗೇ ಚ ಜಂಗಮೇ ತಲ್ಲಿಂಗಜಂಗಮಪ್ರಾಣಂ ಭಕ್ತಸ್ಥಲಮುದಾಹೃತಮ್‌ʼ ಎಂದುದಾಗಿ, ಇದನರಿದು ಅರ್ಥವನೂ ಪ್ರಾಣವನೂ ಅಭಿಮಾನವನೂ ಗುರುಲಿಂಗಜಂಗಮಕ್ಕೆ ಸಮರ್ಪಿಸಿ ಆ ಗುರುಲಿಂಗಜಂಗಮವೆ ಪ್ರಾಣವಾಗಿಹ ಸದ್ಭಕ್ತಂಗೆಯೂ ಆ ಗುರುಲಿಂಗಜಂಗಕ್ಕೆಯೂ ಏಕಭಾಜನವಲ್ಲದೆ ಏಕಭೋಜನವಲ್ಲದೆ, ಭಿನ್ನಭಾಜನ, ಭಿನ್ನಭೋಜನವುಂಟೆ?-ಇಲ್ಲವಾಗಿ, ಅದೇನು ಕಾರಣವೆಂದಡೆ: ಆ ಸದ್ಭಕ್ತನ ಅಂಗವೆಂಬ ಗೃಹದಲ್ಲಿ ಜಂಗಮವಿಪ್ಪನಾಗಿ, ಇದನರಿದು ಬೇರೆ ಮಾಡಿ ನುಡಿಯಲಾಗದು. ಚೆನ್ನಯ್ಯನೊಡನುಂಬುದು ಆವ ಶಾಸ್ತ್ರ? ಕಣ್ಣಪ್ಪ ಸವಿದುದ ಸವಿವುದಾವ ಶಾಸ್ತ್ರ? ಭಕ್ತದೇಹಿಕ ದೇವನಾದ ಕಾರಣ. ಅದೆಂತೆಂದಡೆ: ʼಭಕ್ತಜಿಹ್ವಾಗ್ರತೋ ಲಿಂಗಂ ಲಿಂಗಜಿಹ್ವಾಗ್ರತೋ ರುಚಿಃ ರುಚ್ಯಗ್ರೇ ತು ಪ್ರಸಾದೋಸ್ತು ಪ್ರಸಾದಃ ಪರಮಂ ಪದಮ್‌ʼ ಇಂತೆಂಬ ಪುರಾಣವಾಕ್ಯವರಿದು ಸದ್ಭಕ್ತನೂ ಗುರುಲಿಂಗಜಂಗಮವೂ- ಈ ನಾಲ್ವರೂ ಒಂದೆ ಭಾಜನದಲ್ಲಿ ಸಹಬೋಜನ ಮಾಡುವರಿಂಗೆ ಇನ್ನೆಲ್ಲಿಯ ಸಂಕಲ್ಪವೊ,ಇನ್ನೆಲ್ಲಿಯ ಸೂತಕವೊ, ಇನ್ನೆಲ್ಲಿಯ ಪಾತಕವೊ ಕೂಡಲಸಂಗಮದೇವಾ.