ಬಸವಣ್ಣ   
  ವಚನ - 1376     
 
ಸದ್ಗುರುಮಾರ್ಗಾಚಾರದ ನೆಲೆಕಲೆಯನರಿಯದೆ, ಸದಾಚಾರಸದ್ಭಕ್ತನಲ್ಲಿ ಆಡಂಬರಲಾಂಛನದ ವೇಷವ ಧರಿಸಿ, ಗ್ರಾಸವ ಹೊರೆದು, ಗುಹ್ಯಲಂಪಟ ಹೆಚ್ಚಿ, ಆ ಭಕ್ತನ ಕ್ರಿಯಾಶಕ್ತಿಗೆ ಭ್ರಮಿಸುವನೊಬ್ಬ ಚರಪ್ರಾಣಿಯ ಜಡಜಂತುವೆಂಬೆನಯ್ಯಾ. ಅಂಥ ಕಾಮವಿಕಾರಭ್ರಾಂತನ ಕಾಮವ ಪರಿಹರಿಸಿ, ಲಿಂಗಾಂಗನಿಷ್ಠಾಪರತ್ವವ ಹೇಳದೆ, ತಾ ಭೋಗಿಸುವ ಸ್ತ್ರೀಯಳ ಕೊಡುವನೊಬ್ಬ ಸ್ಥಾವರಪ್ರಾಣಿಯ ಕ್ರಿಮಿಕೀಟಕಪ್ರಾಣಿಯೆಂಬೆನಯ್ಯಾ. ಇಂತು ತನುಮನಧನಂಗಳ ಕೊಟ್ಟುಕೊಂಬ ವಿಚಾರವನರಿಯದೆ ಬಿಂದುವೆ ನಿಜಶೇಷವೆಂದು ತಿಳಿಯದ ಮೂಳನಿಗೆಲ್ಲಿಯೆದೊ ತ್ರಿವಿಧಪ್ರಸಾದ! ಸ್ಥಲದಿಂದ ಸ್ಥಲವನರ್ಪಿಸುವುದು ಒಡಲ ಗುಣ, ನಿಃಸ್ಥಲದಿಂದ ನಿಃಸ್ಥಲವನರ್ಪಿಸುವುದು ಪ್ರಾಣನ ಗುಣ, ನೋಡಿ ಆರೈವುದೆ ಅರ್ಪಿತ ಗುಣ, ಇಂಥ ಮಹಾಂತರ ತೋರಿ ಬದುಕಿಸಯ್ಯಾ, ಕೂಡಲಸಂಗಮದೇವಾ.