ಬಸವಣ್ಣ   
  ವಚನ - 1387     
 
ಸೂತ್ರಧಾರಿ ಮನದ ಮೈಲಿಗೆಯ ಕಳೆಯಬಂದನಯ್ಯಾ ಮಡಿವಾಳನು. ಎನ್ನ ಕಾಯದ ಮೈಲಿಗೆಯ ತಂದು ತನ್ನ ಮುಂದೆ ಇರಿಸಿದೆಡೆ ಸಮತೆಯೆಂಬ ಕೂಪತೋಹಿನಲ್ಲಿ ಅದ್ದಿ, ಕಟ್ಟಿ ಹಿಳಿದನಯ್ಯಾ. ಪಂಚೇಂದ್ರಿಯವರ್ಗಂಗಳ ಜ್ಞಾನವೆಂಬ ನಿರ್ಮಲಜಲದಲ್ಲಿ ಅಲುಬಿ ಸೆಳೆದನಯ್ಯಾ. ರವಿಶಶಿಶಿಖಿಯ ತೇಜದಲ್ಲಿ ಆರಿಸಿದನು, ಚತುರ್ದಶ ಷೋಡಶವೆಂಬ ಘಳಿಗೆಯ ಮಾಡಿದನು, ಸಮಾಧಾನವೆಂಬ ಅಡ್ಡೆಯ ಮೇಲಿರಿಸಿ ಸಮಗುಣವೆಂಬ ಕೊಡತಿಯಲ್ಲಿ ಘಟ್ಟಿಸಿದನು. ಹರಿಯಿತ್ತಯ್ಯಾ ಸೆರಗು ಮೂರಾಗಿ, ಆ ಮೂರರಿವೆಯ ಕೊಟ್ಟನಯ್ಯಾ, ಎನ್ನ ಕೈಯಲ್ಲಿ, ಆ ಅರಿವೆಯ ಗುರುವಿಂಗೊಂದ ಕೊಟ್ಟೆನು, ಲಿಂಗಕ್ಕೊಂದ ಕೊಟ್ಟೆನು, ಜಂಗಮಕ್ಕೊಂದ ಕೊಟ್ಟೆನು. ಎನಗೆ ಕೊಟ್ಟ ಮೂರರಿವೆಯನೂ ಒಂದುಮಾಡಿ ಹೊದೆದುಕೊಂಡು ನಿಶ್ಚಿಂತನಾಗಿ, ಮಡಿವಾಳನ ಕೃಪೆಯಿಂದಲಾನು ಬದುಕಿದೆನು ಕಾಣಾ, ಕೂಡಲಸಂಗಮದೇವಾ.