ಬಸವಣ್ಣ   
  ವಚನ - 1404     
 
ಹಿಂದೆ ಎನ್ನ ಗುರುವನುಮಿಷಂಗೆ ನೀನು ಲಿಂಗವ ಕೊಟ್ಟೆನೆಂಬ ಸೂತಕ ಬೇಡ, ಅಂದು ಅನುಮಿಷ ನಿನ್ನ ಕೈಯಲ್ಲಿ ಕೊಂಡನೆಂಬ ಸಂಕಲ್ಪ ಬೇಡ, ಹಿಂದು ಮುಂದೆಂಬ ಸಂದಳಿದು ನಿಂದಲ್ಲಿ ಭರಿತನಾದ ಬಳಿಕ ಕೊಡಲುಂಟೆ, ಕೊಳಲುಂಟೆ ಹೇಳಾ? ಹಿಡಿದಡೆ ಸಿಕ್ಕದು, ಕೊಡುವಡೆ ಹೋಗದು, ಎಡೆಯಾಟದ ಜೀವಪರಿಯೆಂತಯ್ಯಾ? ಲಿಂಗವ ಹೋಗಾಡಿದನೆಂಬ ನಿಂದೆಯ ಪ್ರಮಥರು ನುಡಿವುತ್ತಿರಲು ಲಿಂಗೈಕ್ಯವೆಂತಪ್ಪುದು ಹೇಳಾ! ನಿಮ್ಮ ಪ್ರಮಥರು ಮೆಚ್ಚಿ ಅಹುದೆಂದು ಒಡಂಬಟ್ಟು, ಎನ್ನ ಮನ ಮನ ತಾರ್ಕಣೆಯಪ್ಪಂತೆ ನಿಮ್ಮಲ್ಲೈಕ್ಯವ ಮಾಡಾ, ಕೂಡಲಸಂಗಮದೇವಾ.