ಅನಂತ ಜನ್ಮಗಳ ಪಾಪಂಗಳು ಸವೆದು ಹೋಗಿ
ಶ್ರೀಗುರುವಿನ ಕರುಣಾಕಟಾಕ್ಷದಿಂದ
ಪ್ರಾಣಲಿಂಗೋಪದೇಶವ ಪಡೆದು
ಸದ್ಭಕ್ತರಾಗಿ ಶಿವಲಿಂಗ ದರ್ಶನ ಸ್ಪರ್ಶನವ ಮಾಡಿ
ಆ ಲಿಂಗವನಂಗದಲ್ಲಿ ಧರಿಸಿಕೊಂಡು
ಅಂಗವೇ ಲಿಂಗ ಲಿಂಗವೇ ಅಂಗ
ಪ್ರಾಣವೇ ಲಿಂಗ ಲಿಂಗವೇ ಪ್ರಾಣವಾಗಿ
ಅಂತರಂಗ ಬಹಿರಂಗ ಸರ್ವಾಂಗವೆಲ್ಲವೂ
ಲಿಂಗವಾದ ಬಳಿಕ
ಇಂತೀ ಶ್ರೀಗುರು ಕೊಟ್ಟ ಲಿಂಗವ ಬಿಟ್ಟು
ಬೋರೆ ಮತ್ತೆ ಆತ್ಮತತ್ತ್ವವ ವಿಚಾರಿಸಿ ನೋಡಬೇಕೆಂದು
ಪರಮಾತ್ಮನಲ್ಲಿ ಯೋಗವ ಮಾಡಿ
ಯೋಗಿಗಳಾಗಿ ಮುಕ್ತರಾದೆವೆಂಬಿರಿ.
ಶಿವಶಿವಾ, ಆತ್ಮನನು ಪರಮಾತ್ಮನನು
ಶ್ರೀ ಗುರುಸ್ವಾಮಿ ಒಂದು ಮಾಡಿ
ಇದೇ ನಿನ್ನ ನಿಜತತ್ತ್ವವೆಂದು
ಅರುಹ ಹೇಳಿ ತೋರಿಸಿಕೊಟ್ಟ ಬಳಿಕ
ಇಂತಹ ಗುರುಸ್ವಾಮಿಯ ಆಜ್ಞೆಯ ಮೀರಿ
ಲಿಂಗವನರಿಯದೆ ಲಿಂಗಬಾಹಿರರಾದ
ದ್ವಿಜರನು ಯೋಗಿಯನು ಸನ್ಯಾಸಿಯನು
ಗುರುವೆಂದು ಭಾವಿಸಬಹುದೆ?
ಶಿವ ಶಿವಾ, ಅದು ಗುರುದ್ರೋಹ.
ಪರಶಿವಮೂರ್ತಿಯಾದ ಗುರುಸ್ವಾಮಿಯು
ಷಡ್ದರ್ಶನಗಳಿಗೂ ಸಮಸ್ತಮತಂಗಳಿಗೂ
ಸಮಸ್ತಾಗಮಂಗಳಿಗೆಯೂ
ಶಿವನೊಬ್ಬನೇ ಕರ್ತನೆಂದು, ಶಿವದರ್ಶನವೇ
ವಿಶೇಷವೆಂದು, ಅಧಿಕವೆಂದು
ಹೇಳಿ ತೋರಿ ಕೊಟ್ಟ ಬಳಿಕ
ಶೈವವೆಂದು ಶಾಕ್ತೇಯವೆಂದು ವೈಷ್ಣವವೆಂದು
ಗಾಣಪತ್ಯವೆಂದು ಸೌರವೆಂದು ಕಾಪಾಲಿಕವೆಂದು
ಇಂತೀ ಷಡ್ದರ್ಶನಂಗಳಿಗೆಯೂ ಶಿವನೊಬ್ಬನೇ ಕರ್ತ,
ಇಂತೀ ಷಡ್ದರ್ಶನಕ್ಕೆ ಶಿವದರ್ಶನವೇ ಅಧಿಕವೆಂದು,
ಇಂತೀ ಶಿವದರ್ಶನ ಮಾರ್ಗವಿಲ್ಲದೆ ಮುಕ್ತಿಯಿಲ್ಲವೆಂದು,
ಆ ಪರಶಿವನೆಂಬ ಗುರುಮೂರ್ತಿ ಅರುಹಿ ಕಾಣಿಸಿ ಹೇಳಿ
ತೋರಿ ಕೊಟ್ಟ ಬಳಿಕ ಅದೆಂತೆಂದಡೆ ಶಿವಧರ್ಮೇ_
ʼದರ್ಶನಂ ಷಡ್ವಿಧಂ ಪ್ರೋಕ್ತಂ ಶೈವಂ ಶಾಕ್ತಂ ವೈಷ್ಣವಂ
ಗಣಾಪತ್ಯಂ ಚ ಸೌರಂ ಚ ಕಾಪಾಲಿಕಮಿತಿ ಸ್ಮೃತಮ್ʼ
ಮತ್ತಂ
ʼಷಡ್ದರ್ಶನಾದಿ ದೇವೋ ಹಿ ಮಹಾದೇವೋ ನ ಸಂಶಯಃ
ಮಂತ್ರಪೂಜಾದಿ ಭಿನ್ನಾನಾಂ ಮೂಲಂ ಪರಶಿವಸ್ತಥಾʼ
ಎಂಬುದಾಗಿ, ಇನ್ನು
ವೈಷ್ಣವವೆಂದು ಆತ್ಮಯೋಗವೆಂದು ಶಾಕ್ತಿಕವೆಂದು
ವೈದಿಕವೆಂದು ಇಂತೀ ಭ್ರಾಂತಿನ ದರ್ಶನಮತಂಗಳನು ಕೇಳಿ,
ಅಲ್ಲಿಯ ಧರ್ಮಾಧರ್ಮಂಗಳನು ಕೇಳಿ,
ಅಲ್ಲಿ ಉಪದೇಶವ ಮಾಡಿಸಿಕೊಳ್ಳಬಹುದೇ?
ಶಿವಶಿವಾ, ಅದು ಗುರುದ್ರೋಹ, ಆ ಶ್ರೀಗುರುವಿನಾಜ್ಞೆಯ ಮೀರದಿರಿ.
ಆ ಪರಶಿವಮೂರ್ತಿತತ್ತ್ವವೇ ಗುರುಸ್ವಾಮಿಯಾಗಿ ಚೆನ್ನಾಗಿ ಅರುಹಿ
ತೋರಿ ಹೇಳಿ ಕೊಟ್ಟನಲ್ಲದೆ ಆ ಗುರುಸ್ವಾಮಿ ಏನು ತಪ್ಪಿ ಹೇಳಿದುದಿಲ್ಲ.
ಶ್ರುತಿ ``ಏಕೋ ದೇವೋ ನ ದ್ವಿತೀಯಾಯ ತಸ್ಥೇ'
ಎಂದುದಾಗಿ ಶಿವನೊಬ್ಬನೇ ದೈವವೆಂದು ತೋರಿಕೊಟ್ಟ ಶ್ರೀಗುರು.
ಶ್ರುತಿ ``ಏಕೋ ಧ್ಯೇಯಃ' ಎಂದು
ಶಿವನೊಬ್ಬನನ್ನೇ ಧ್ಯಾನಿಸಿ ಪೂಜಿಸೆಂದು ಹೇಳಿ ತೋರಿಕೊಟ್ಟನು ಶ್ರೀಗುರು.
ಶ್ರುತಿ ``ನಿರ್ಮಾಲ್ಯಮೇವ ಭಕ್ಷಯಂತಿ' ಎಂದುದಾಗಿ
ಶಿವಪ್ರಸಾದವನೆ ಗ್ರಹಿಸಿಯೆಂದು ಪ್ರಸಾದವ ಕರುಣಿಸಿದ ಶ್ರೀಗುರು
ಇಂತಹ ಶ್ರೀಗುರು ಮರುಳನು, ನೀನು ಬುದ್ಧಿವಂತನೇ?
ಕೇಳಾ, ನಿಮ್ಮ ಗುರುವ ಮರುಳ ಮಾಡಿದಿರಿ, ಅದೆಂತೆಂದಡೆ:
ನಿಮ್ಮಿಚ್ಛೆಯಲ್ಲಿಯೇ ಬಂದುದಾಗಿ, ಅದಲ್ಲದೆ ಮತ್ತೆ ಕೇಳು:
ಪೂರ್ವದ ಪುರುಷರು ಮರುಳರು, ನೀನೊಬ್ಬನೇ ಬುದ್ಧಿವಂತ?
ಕೇಳೋ: ದೂರ್ವಾಸ ಉಪಮನ್ಯು ದಧೀಚಿ ಜಮದಗ್ನಿ ಮಾರ್ಕಂಡೇಯ
ಪರಾಶರ ಮೊದಲಾದ ಋಷಿಗಳೆಲ್ಲ ಶಿವಾರ್ಚನೆಯಂ ಮಾಡಿದರು.
ಬ್ರಹ್ಮವಿಷ್ಣು ಮೊದಲಾದವರೆಲ್ಲರೂ
ಶಿವಲಿಂಗಾರ್ಚನೆಯ ಮಾಡಿದರು, ಕೇಳಿರೇ ನೋಡಿರೇ ದೃಷ್ಟವನು.
ಮತ್ಸ್ಯಕೇಶ್ವರ ಕೂರ್ಮೇಶ್ವರ ವರಾಹೇಶ್ವರ ನಾರಸಿಂಹೇಶ್ವರ ರಾಮೇಶ್ವರ
ಎಂಬ ದಶಾವತಾರಗಳಲ್ಲಿ ಶಿವಲಿಂಗಪ್ರತಿಷ್ಠೆಯಂ ಮಾಡಿ
ಶಿವಲಿಂಗಾರ್ಚಾನೆಯಂ ಮಾಡಿದರು.
ಅನೇಕ ವೇದಶಾಸ್ತ್ರಾಗಮಪುರಾಣಂಗಳ ಕೇಳಿರೇ ನೋಡಿರೇ.
ʼಯಂ ಯಂ ಕಾಮಯತೇ ಕಾಮಂ ತಂ ತಂ ಲಿಂಗಾರ್ಚನಾಲ್ಲಭೇತ್
ನ ಲಿಂಗೇ [ನ] ವಿನಾ ಸಿದ್ದಿದುರ್ಲಭಂ ಪರಮಂ ಪದಂʼ ಮತ್ತಂ
ʼಅಸುರಾ ದಾನವಾಶ್ಚೈವ ಪಿಶಾಚೋರಗರಾಕ್ಷಸಾಃ
ಆರಾಧ್ಯಂ ಪರಮಂ ಲಿಂಗಂ ಪ್ರಾಪುಸ್ತೇ ಸಿದ್ಧಿಮುತ್ತಮಾಮ್ʼ ಮತ್ತಂ
ʼಅಗ್ನಿಹೋತ್ರಶ್ಚವೇದಶ್ಚ ಯಜ್ಞಾಶ್ಚ ಬಹುದಕ್ಷಿಣಾಃ
ಶಿವಲಿಂಗಾರ್ಚನಸ್ಯೈತೇ ಕೋಟ್ಯಂಶೇನಾಪಿ ನೋ ಸಮಾಃʼ
ಎಂದುದಾಗಿ, ಇಂತು ಇದು ಮೊದಲಾದ ದೇವಜಾತಿಗಳೆಲ್ಲ
ಶಿವಲಿಂಗಾರ್ಚನೆಯಂ ಮಾಡಿದುದಕ್ಕೆ ದೃಷ್ಟ ನೋಡಿರೇ:
ಕಾಶೀಕ್ಷೇತ್ರದಲ್ಲಿ ಬ್ರಹ್ಮೇಶ್ವರ ಇಂದ್ರೇಶ್ವರ ಯಕ್ಷಸಿದ್ದೇಶ್ವರ
ಎಂಬ ಲಿಂಗಂಗಳಂ ಪ್ರತಿಷ್ಠಿಸಿ ಶಿವಲಿಂಗಾರ್ಚನೆಯಂ ಮಾಡಿದರು.
ತಾರಕ ರಾವಣಾದಿಗಳೆಲ್ಲ ಶಿವಲಿಂಗಾರ್ಚನೆಯಂ ಮಾಡಿದರು.
ಇಂತವರೆಲ್ಲರು ಮರುಳರು, ನೀನೊಬ್ಬನೇ ಬುದ್ಧಿವಂತನೆ?
ಅದು ಕಾರಣ, ಆ ಶ್ರೀಗುರುವಿನಾಜ್ಞೆಯಂ ಮೀರಿ ಕೆಡದಿರಿ ಕೆಡದಿರಿ.
ಆ ಮಹಾ ಶ್ರೀಗುರುವಿನ ವಾಕ್ಯವನೇ ನಂಬಿ,
ಗುರುಲಿಂಗಜಂಗಮವನೊಂದೇಯೆಂದು ನಿಶ್ಚಯಿಸಿ,
ಇದೇ ಅಧಿಕ, ಇದರಿಂದ ಬಿಟ್ಟು ಮತ್ತಾವುದು ಅಧಿಕವಿಲ್ಲ.
ಅಂದು ಗುರುಲಿಂಗಜಂಗಮದಲ್ಲಿಯ ಭಕ್ತಿಯೆ ಭಕ್ತಿ,
ಅರ್ಚನೆಯೇ ಅರ್ಚನೆ, ಆ ಸಂಗವೇ ಶಿವಯೋಗ,
ಇದು ಸತ್ಯ ಶಿವನಾಣೆ, ಉರಿಲಿಂಗಪೆದ್ಧಿಪ್ರಿಯ ವಿಶ್ವೇಶ್ವರಾ.
Transliteration Ananta janmagaḷa pāpaṅgaḷu savedu hōgi
śrīguruvina karuṇākaṭākṣadinda
prāṇaliṅgōpadēśava paḍedu
sadbhaktarāgi śivaliṅga darśana sparśanava māḍi
ā liṅgavanaṅgadalli dharisikoṇḍu
aṅgavē liṅga liṅgavē aṅga
prāṇavē liṅga liṅgavē prāṇavāgi
antaraṅga bahiraṅga sarvāṅgavellavū
liṅgavāda baḷika
intī śrīguru koṭṭa liṅgava biṭṭuBōre matte ātmatattvava vicārisi nōḍabēkendu
paramātmanalli yōgava māḍi
yōgigaḷāgi muktarādevembiri.
Śivaśivā, ātmananu paramātmananu
śrī gurusvāmi ondu māḍi
idē ninna nijatattvavendu
aruha hēḷi tōrisikoṭṭa baḷika
intaha gurusvāmiya ājñeya mīri
liṅgavanariyade liṅgabāhirarāda
dvijaranu yōgiyanu san'yāsiyanu
guruvendu bhāvisabahude?
Śiva śivā, adu gurudrōha.
Paraśivamūrtiyāda gurusvāmiyu
Ṣaḍdarśanagaḷigū samastamataṅgaḷigū
samastāgamaṅgaḷigeyū
śivanobbanē kartanendu, śivadarśanavē
viśēṣavendu, adhikavendu
hēḷi tōri koṭṭa baḷika
śaivavendu śāktēyavendu vaiṣṇavavendu
gāṇapatyavendu sauravendu kāpālikavendu
intī ṣaḍdarśanaṅgaḷigeyū śivanobbanē karta,
intī ṣaḍdarśanakke śivadarśanavē adhikavendu,
intī śivadarśana mārgavillade muktiyillavendu,
ā paraśivanemba gurumūrti aruhi kāṇisi hēḷi
tōri koṭṭa baḷika adentendaḍe śivadharmē_
ʼdarśanaṁ ṣaḍvidhaṁ prōktaṁ śaivaṁ śāktaṁ vaiṣṇavaṁGaṇāpatyaṁ ca sauraṁ ca kāpālikamiti smr̥tamʼ
mattaṁ
ʼṣaḍdarśanādi dēvō hi mahādēvō na sanśayaḥ
mantrapūjādi bhinnānāṁ mūlaṁ paraśivastathāʼ
embudāgi, innu
vaiṣṇavavendu ātmayōgavendu śāktikavendu
vaidikavendu intī bhrāntina darśanamataṅgaḷanu kēḷi,
alliya dharmādharmaṅgaḷanu kēḷi,
alli upadēśava māḍisikoḷḷabahudē?
Śivaśivā, adu gurudrōha, ā śrīguruvinājñeya mīradiri.
Ā paraśivamūrtitattvavē gurusvāmiyāgi cennāgi aruhi
tōri hēḷi koṭṭanallade ā gurusvāmi ēnu tappi hēḷidudilla.
Śruti ``ēkō dēvō na dvitīyāya tasthē'
endudāgi śivanobbanē daivavendu tōrikoṭṭa śrīguru.
Śruti ``ēkō dhyēyaḥ' endu
śivanobbanannē dhyānisi pūjisendu hēḷi tōrikoṭṭanu śrīguru.
Śruti ``nirmālyamēva bhakṣayanti' endudāgi
śivaprasādavane grahisiyendu prasādava karuṇisida śrīguruIntaha śrīguru maruḷanu, nīnu bud'dhivantanē?
Kēḷā, nim'ma guruva maruḷa māḍidiri, adentendaḍe:
Nim'miccheyalliyē bandudāgi, adallade matte kēḷu:
Pūrvada puruṣaru maruḷaru, nīnobbanē bud'dhivanta?
Kēḷō: Dūrvāsa upaman'yu dadhīci jamadagni mārkaṇḍēya
parāśara modalāda r̥ṣigaḷella śivārcaneyaṁ māḍidaru.
Brahmaviṣṇu modalādavarellarū
śivaliṅgārcaneya māḍidaru, kēḷirē nōḍirē dr̥ṣṭavanu.
Matsyakēśvara kūrmēśvara varāhēśvara nārasinhēśvara rāmēśvara
emba daśāvatāragaḷalli śivaliṅgapratiṣṭheyaṁ māḍi
śivaliṅgārcāneyaṁ māḍidaru.Anēka vēdaśāstrāgamapurāṇaṅgaḷa kēḷirē nōḍirē.
ʼyaṁ yaṁ kāmayatē kāmaṁ taṁ taṁ liṅgārcanāllabhēt
na liṅgē [na] vinā siddidurlabhaṁ paramaṁ padaṁʼ mattaṁ
ʼasurā dānavāścaiva piśācōragarākṣasāḥ
ārādhyaṁ paramaṁ liṅgaṁ prāpustē sid'dhimuttamāmʼ mattaṁ
ʼagnihōtraścavēdaśca yajñāśca bahudakṣiṇāḥ
śivaliṅgārcanasyaitē kōṭyanśēnāpi nō samāḥʼ
endudāgi, intu idu modalāda dēvajātigaḷella
śivaliṅgārcaneyaṁ māḍidudakke dr̥ṣṭa nōḍirē:
Kāśīkṣētradalli brahmēśvara indrēśvara yakṣasiddēśvara
emba liṅgaṅgaḷaṁ pratiṣṭhisi śivaliṅgārcaneyaṁ māḍidaru.
Tāraka rāvaṇādigaḷella śivaliṅgārcaneyaṁ māḍidaru.
Intavarellaru maruḷaru, nīnobbanē bud'dhivantane?
Adu kāraṇa, ā śrīguruvinājñeyaṁ mīri keḍadiri keḍadiri.
Ā mahā śrīguruvina vākyavanē nambi,Guruliṅgajaṅgamavanondēyendu niścayisi,
idē adhika, idarinda biṭṭu mattāvudu adhikavilla.
Andu guruliṅgajaṅgamadalliya bhaktiye bhakti,
arcaneyē arcane, ā saṅgavē śivayōga,
idu satya śivanāṇe, uriliṅgaped'dhipriya viśvēśvarā.