•  
  •  
  •  
  •  
Index   ವಚನ - 206    Search  
 
ಭಕ್ತಿಭಾಂಡದ ಶಿವಭಕ್ತರ ನಿಷೇಧವ ಮಾಡುವ ಕರ್ಮಭಾಂಡದ ದ್ವಿಜರು ನೀವು ಕೇಳಿಭೋ : `ಸತ್ಯಂ ಭೋ ಬ್ರೂತ ಪಂಚಪ್ರಾಣ ಇಂದ್ರಿಯನಿಗ್ರಹʼಮೆಂದೋದಿ ಗುದ್ದಿ ಗುದ್ದಿ ಹೋತನ ತಿಂಬುದಾವಾಚಾರವೊ? `ಪಿತಾಮಹಶ್ಚ ವೈಶ್ಯಸ್ತು ಕ್ಷತ್ರಿಯೋ ಪರಯೋ ಹರಿಃ ಬ್ರಾಹ್ಮಣೋ ಭಗವಾನ್ ರುದ್ರಃ ಸರ್ವೇಷ್ವ್ಯ ತ್ತಮೋತ್ತಮಃ ಎಂಬ ಶ್ರುತಿಯ ನೋಡಿ, ತಮ್ಮ ಕುಲದೈವವಹ ಬ್ರಾಹ್ಮಣನಹ ರುದ್ರನ ನಿಂದಿಸಿ, ತಮಗಿಂದ ಕೀಳುಜಾತಿಯಹ ಕ್ಷತ್ರಿಯ ಹರಿಯ ಆರಾಧಿಸುವ ಕುಲಹೀನರು ನೀವು ಕೇಳಿಭೋ : `ಜನ್ಮನಾ ಜಾಯತೇ ಶೂದ್ರಃ ಕರ್ಮಣಾ ದ್ವಿಜಮುಚ್ಯತೇʼ `ವೇದಾಭ್ಯಾಸೇನ ವಿಪ್ರಸ್ತು ಬ್ರಹ್ಮಣಾ ಚರಂತೀತಿ ಬ್ರಾಹ್ಮಣಃʼ ಎಂಬ ಶ್ರುತಿಯನೋದಿ, ಪರಬ್ರಹ್ಮನಂತಹ ಶಿವಲಿಂಗಪೂಜೆಯನಾಚರಿಸಿ ಬ್ರಾಹ್ಮಣತ್ವವನೈ[ದದೆ] ಶತಯಾಗಂಗಳ ಮಾಡಿ ಶೂದ್ರನಹ ಇಂದ್ರತ್ವವ ಬಯಸುವ ಅಧಮರು ನೀವು ಕೇಳಿಭೋ : `ಜನ್ಮನಾ ಜಾಯತೇ ಶೂದ್ರಃ ಮಾತಾ ಸಾ ಪ್ರಥಮಂ ಶೂದ್ರಾಣಿ ನಚೋಪದೇಶಃ ಗಾಯತ್ರೀ ನ ಚ ಮೌಂಜೀ ನ ಚ ಕ್ರಿಯಾʼ ಎಂದುದಾಗಿ, ದೀಕ್ಷೆಯಿಲ್ಲದೆ ಸತಿಶೂದ್ರಗಿತ್ತಿಗೆ ಹುಟ್ಟಿದವನೊಡನುಂಬ ಅನಾಚಾರಿಗೆ ಎಲ್ಲಿಯದೊ ಬ್ರಾಹ್ಮಣತ್ವ? ಆವ ಜಾತಿಯವನಾದರೇನು ಶಿವಭಕ್ತನೆ ಬ್ರಾಹ್ಮಣ. ಅದಕ್ಕೆ ಸಾಕ್ಷಿ : . `ತಪಸಾ ಬ್ರಾಹ್ಮಣೋsಭವತ್ ಸಾಂಖ್ಯಾಯನ ಮಹಾಮುನಿಃ| ತಪಸಾ ಬ್ರಾಹ್ಮಣೋsಭವತ್ ಗೌತಮಸ್ತು ಮಹಾಮುನಿಃ| ಜಾತಿಂ ನ ಕಾರಯೇತ್ತೇಷು ಶ್ರೇಷ್ಠಾಃ ಸಮಭವಂಸ್ತತಃ| ತಜ್ಜಾತಿರಭವತ್ತೇನ' ಎಂದುದಾಗಿ, ತಮ್ಮ ತಮ್ಮ ಗೋತ್ರಂಗಳೆ ಸಾಕ್ಷಿಯಾಗಿ ಸಾರುತ್ತಿರಲು ಕುಭ್ರಮೆಯಾತಕ್ಕೆ? ಶ್ವಪಚೋsಪಿ ಮುನಿಶ್ರೇಷ್ಠಃ ಶಿವಭಕ್ತಿಸಮನ್ವಿತಃ| ಶಿವಭಕ್ತಿವಿಹೀನಸ್ತು ಶ್ವಪಚೋsಪಿ ದ್ವಿಜಾಧಮಃ|| ಎಂದುದಾಗಿ ಶಿವಭಕ್ತನೆ ಕುಲಜ, ಶಿವಭಕ್ತಿ ಇಲ್ಲದವನೆ ಶ್ವಪಚನೆಂದರಿಯದ ಅಜ್ಞಾನಿಗಳು ನೀವು ಕೇಳಿಭೋ! `ಏಕ ಏವ ರುದ್ರೋ ನ ದ್ವಿತೀಯಾಯತಸ್ಥೇ' ಎಂದು ವೇದವನೋದಿ `ಪಶುಪತಯೇ ನಮಃ' ಎಂದಾ ರುದ್ರವನೋದಿ ಶಿವನೆ ಪತಿ ಮಿಕ್ಕಿನ ದೈವಂಗಳೆಲ್ಲ ಪಶುಗಳೆಂಬುದ ತಿಳಿದು ಮತ್ತೆಯೂ ಈ ದ್ವಿಜರು ಕಾಣಲರಿಯರು. ಹರಹರನೊಂದೆಯೆಂಬ ನರಗುರಿಗಳು ನೀವು ಕೇಳಿಭೋ! ಪಾರಾಶ[ರ] ಪುರಾಣೇ : ಆದೌ ರುದ್ರಾಂಗಮುತ್ಪತ್ತಿಃ ಮುಖೇ ಬ್ರಾಹ್ಮಣಮೀಶ್ವರಃ ವಿಷ್ಣುಂ ಕ್ಷತ್ರಿಯಮಿತ್ಯಾಹುರ್ಬಾಹುನಾ ಚ ಅವಸ್ಥಿತಃ ವೈಶ್ಯಶ್ಚ ಬ್ರಹ್ಮಾ ಇತ್ಯಾಹುಃ ಲಿಂಗಾದೇವ ಅವಸ್ಥಿತಃ| ಸುರಪೋ ಶೂದ್ರಯಿತ್ಯಾಹುಃ ದೇವಪಾದಾದವಿಸ್ಥಿತಃ|| ಎಂದುದಾಗಿ, ರುದ್ರನ ಮುಖದಲ್ಲಿ ಹುಟ್ಟಿದವನೆ ಬ್ರಾಹ್ಮಣ, ಮಿಕ್ಕಾದ ವಿಪ್ರರೆಲ್ಲರು ಋಷಿಗೋತ್ರದಲ್ಲಿ ಹುಟ್ಟಿದರು. ಆ ಋಷಿಮೂಲದ ವಿಪ್ರರೆಲ್ಲರು ಅಧಮಜಾತಿ ಅಧಮಜಾತಿಯಾದರೇನು? ರುದ್ರಭಕ್ತರಾದ ಕಾರಣ ಬ್ರಾಹ್ಮಣರಾದರು. ಈ ವರ್ಮವನರಿಯದ ಚಾಂಡಾಲ ವಿಪ್ರರ್ಗೇನೂ ಸಂಬಂಧವಿಲ್ಲ. ಕಾಕ ರುದ್ರನ ಮುಖದಲ್ಲಿ ಉದ್ಭವವೆಂಬುದಕ್ಕೆ ಶ್ವಾನಸೂಕರರೂಪೇ ಚ ಪ್ರೇತಪಿಂಡ ಪ್ರದಾನತಃ| ಪ್ರೇತತ್ವಂ ಚ ಸದಾ ಸ್ಯಾತ್ ತಥಾ ಧರ್ಮೇಣ ಲುಪ್ಯತೇ|| ಎಂದುದಾಗಿ ಆಗಮಾರ್ಥವನರಿಯದೆ, ಪ್ರೇತಪಿಂಡವನಿಕ್ಕುವ ಪಾತಕರು, [ಪ್ರಾಣಾಯಸ್ವಾಹಾ]ಅಪಾನಾಯ ಸ್ವಾಹಾ, ವ್ಯಾನಾಯ ಸ್ವಾಹಾ ಉದಾನಾಯ ಸ್ವಾಹಾ, ಸಮಾನಾಯ ಸ್ವಾಹಾ' ಎಂದು ಭೂತಬಲಿಯ ಬೆಕ್ಕು ನಾಯಿಗೆ ಹಾಕಿ ಮಿಕ್ಕ ಭೂತಶೇಷವ ಕೊಂಬ ಅಕುಲಜರು, ನೀವು ಕೇಳಿಭೋ! `ವಸುರೂಪೋ ಮಧ್ಯಪಿಂಡಃ ಪುತ್ರಪೌತ್ರಪ್ರವರ್ಧನಃ' ಎಂದು, ರುದ್ರಪ್ರಸಾದವನೆ ಕೊಂಡು ರುದ್ರಪಿಂಡದಿಂದ ಹುಟ್ಟಿ, ದೀಕ್ಷಾಕಾಲದಲ್ಲಿ ಭಸಿತವ ಧರಿಸಿ, ಬ್ರಹ್ಮಕಪಾಲಪಾತ್ರೆಯಂ ಪಿಡಿದು, ಪಲಾಶಕಂಕಾಳದಂಡಮಂ ಪಿಡಿದು, `ಭವತೀ ಭಿಕ್ಷಾಂ ದೇಹಿ'ಯೆಂದು ಭಿಕ್ಷಮಂ ಬೇಡಿ ಪಿತೃಕಾರ್ಯದಲ್ಲಿ `ವಿಶ್ವೇ ದೇವಾಂಸ್ತರ್ಪಯಾಮಿ'ಯೆಂದರ್ಚಿಸಿ, ಮರಣಕಾಲದಲ್ಲಿ ರುದ್ರಭೂಮಿಯಲ್ಲಿ ರುದ್ರಾಗ್ನಿಯಿಂದ ದಹನ ರುದ್ರವಾಹನದ ಬಾಲವಿಡಿದು ಸ್ವರ್ಗವನೆಯ್ದಿದರು, ರುದ್ರಭಕ್ತಿವಿರುದ್ಧ ವಿಚಾರಹೀನರು. `ತ್ರ್ಯಾಯುಷಂ ಜಮದಗ್ನೇಃ ಕಶ್ಯಪಸ್ಯ ತ್ರಿಯಾಯುಷಂ, ಅಗಸ್ತ್ಯಸ್ಯ ತ್ರಿಯಾಯುಷಂ(ತನ್ಮೇಸ್ತು)ತ್ರಿಯಾ ಶತಸಯುಷಂʼ ಎಂದು ಸಕಲಋಷಿಗಳು ಶ್ರೀ ವಿಭೂತಿಯನು ಧರಿಸಿ, ಬಹಳಾಯುಷ್ಯಮಂ ಪಡೆದರೆಂದು ಮತ್ತೆಯು ಯಜುಸ್ಸಿನಲ್ಲಿ ದೀಕ್ಷೆಯನೈದಲ್ಲಿ, `ಭೂತಿವಾಂಶ್ಚ ಪ್ರಿಯಂ ಹೋತವ್ಯಂ'ಯೆಂದು, ಶ್ರೀವಿಭೂತಿಯನೆ ಧರಿಸಹೇಳಿತ್ತು ವೇದವು. `ಗೋಪೀ ಮಲಿನಧಾರೀ ತು ಶಿವಂ ಸ್ಪೃಶತಿ ಯೋ ದ್ವಿಜಃ| ತದೈಕವಿಂಶತಿಕುಲಂ ಸಾಕ್ಷಾತ್ತು ನರಕಂ ವ್ರಜೇತ್ '|| ಎಂದು, ಗೋಪಿ ಮಲಿನ ಚಂದನವನಿಟ್ಟು, ಪಾತಕರು[ವ] ಶಿವಲಿಂಗ ಮುಟ್ಟಿದರೆ ತಮ್ಮಿಪ್ಪತ್ತೊಂದು ಕುಲಸಹಿತ ಕೇಡಿಲ್ಲದ ನರಕದಲ್ಲಿ ಬೀಳುವರೆಂದರಿಯದೆ ಮುಟ್ಟಿಯನಿಟ್ಟ ಭ್ರಷ್ಟರು, ಮತ್ಸ್ಯ ಕೂರ್ಮ ವರಾಹ ನಾರಸಿಂಹ ಈ ನಾಲ್ಕೂ ಅವತಾರದಲ್ಲಿ ನೀರಿಂದ ಬಲಿ ಧಾರೆಯನೆರೆದನೆಂಬುದನರಿದು, ವಿಷ್ಣುವಿನ ಪಾದದಲ್ಲಿ ಗಂಗೆ ಹುಟ್ಟಿತೆಂಬ ವಿಚಾರಹೀನರು `ವಿಯದ್ವಿಷ್ಣುಪದಂ ಪ್ರೋಕ್ತಂ ಪುಂಸ್ಯಾಕಾಶವಿಹಾಯಸೀ| ವಿಹಾಯಸೋsಪಿ ನಾಕೋsಪಿ ದ್ಯುರಪಿ ಸ್ಯಾತ್ತಿದವ್ಯಯಂ'|| ಎಂದು ನಿಘಂಟಿನಲ್ಲಿ ಆಕಾಶದ ಹೆಸರು ವಿಷ್ಣುಪದಿ, ಆಕಾಶಗಂಗೆ ಮುನ್ನಲುಂಟೆಂಬುದನರಿತು, ವಿಷ್ಣುವಿನ ಕಾಲಲ್ಲಿ ಗಂಗೆ ಹುಟ್ಟಿತೆಂಬ ದುಷ್ಟರು, ವೇದಕ್ಕೆ ನೆಲೆಗಟ್ಟು ಓಂಕಾರ, ಬ್ರಾಹ್ಮಣಕ್ಕೆ ನೆಲೆಗಟ್ಟು ಗಾಯತ್ರಿಯಲ್ಲಿ ಶಿವನೆ ದೈವವೆಂದಿತ್ತು. `ಓಂ ಭೂಃ ಓಂ ಭುವಃ ಓಂ ಸುವಃ ಓಂ ಮಹಃ ಓಂ ಜನಃ ಓಂ ತಪಃ ಓಂ ಸತ್ಯಂ ಓಂ ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ ಧಿಯೋ ಯೋ ನಃ ಪ್ರಚೋದಯಾತ್ʼ ಹರ ಹರಿಭಕ್ತನೆಂದನಿಸುವ ವಿಚಾರಹೀನರು ನೀವು ಕೇಳಿಭೋ! ಹರಿ ಶಿವನ ಭಕ್ತನೆಂಬುವದಕ್ಕೆ ಸಾವಿರಕಮಲ ಕೊರತೆಗೆ ತನ್ನ ನಯನ ಕಮಲಮಂ ಕಳೆದು ಶಿವನಂಘ್ರಿಗರ್ಪಿಸಿ, ಚಕ್ರಮಂ ಪಡೆದನೆಂದು ಮಹಿಮದಲ್ಲಿ ʼಹರಿಸ್ತೇ ಸಾಹಸ್ರಂ ಕಮಲಬಲಿಯಾಧಾಯ ಪದಯೋಃ' ಎಂದೋದಿ ಮರೆದ ಮತಿಭ್ರಷ್ಟರು ನೀವು ಕೇಳಿಭೋ! ಹರನೆ ಕರ್ತ, ಹರಿಯೆ ಭೃತ್ಯನೆಂಬುದಕ್ಕೆ ರಾಮಪ್ರತಿಷ್ಠೆ ಶಿವಲಿಂಗ[ದ] ಮೂರ್ತಿಗಳಿಂ ಕಾಣಿರೆ, ಕಂಡು ತಿಳಿಯಲರಿಯದ ಹುಲಮನುಜರು ಶ್ರೀರಾಮನ ಗುರು ವಶಿಷ್ಠ ಹಂಪೆಯಲ್ಲಿ ವಿರೂಪಾಕ್ಷಲಿಂಗನ ಭಕ್ತನೆಂದರಿದು, ಕೃಷ್ಣಾವಿಷ್ಣುವಿನ ಗುರು ಉಪಮನ್ಯು ಅಹಿಪುರದಲ್ಲಿ ಸೋಮೇಶ್ವರಲಿಂಗನ ಭೃತ್ಯನೆಂಬುದನರಿದು, ಇಂತು ಭೃತ್ಯನ ಶಿಷ್ಯಂಗೆ ಕರ್ತನ ಸರಿಯೆಂಬ ಕರ್ಮಚಂಡಾಲರು ನೀವು ಕೇಳಿಭೋ! `ಅಸಂಖ್ಯಕೋಟಿಬ್ರಹ್ಮಾಣಾಂ ಕೋಟಿವಿಷ್ಣುಗಣಂ ತತಃ| ಗಂಗಾವಾಲುಕ ಸಮೌ ಹೇತೌ ಕಿಂಚಿದಜ್ಞಾಃ ನ ಮಹೇಶ್ವರಾತ್|| ಎಂದು ರುದ್ರನ ಎವೆಯಾಡುವನಿತಕ್ಕೆ ಲೆಕ್ಕವಿಲ್ಲದ ಕೋಟಿ ಬ್ರಹ್ಮವಿಷ್ಣುರು ಸತ್ತುಹೋದರೆಂದು ಓದಿ ತಿಳಿದು ಇಂಥ ಹುಲುದೈವಂಗಳ `ಮೃತ್ಯುಂಜಯಃ ನಿತ್ಯಃ ಏಕೋ ದೇವಃ ನ ದ್ವಿತೀಯಃ' ಎಂದೆನಿಸುವ ಶಿವಗೆ ಸರಿಯಂದೆನಿಸುವ ಭವಿವಿಪ್ರರಿಗೆ ತಾವು ಓದುವ, ವೇದಾಗಮಂಗಳು ತಮಗೆ ಹಗೆಯಾಗಿ ನಡೆಯೊಂದು ಪರಿ ನುಡಿಯೊಂದು ಪರಿ ಆಗಿಹುದು. ಅದೆಂತೆಂದರೆ:ಗೌತಮ ದಧೀಚಿ ಭೃಗುವಾದಿಯಾಗಿ ಹಿರಿಯರುಗಳೇ ಶಾಪದಿಂದ ಶಾಪಹತರಾಗಿ ಶಿವದ್ರೋಹಿಗಳಾಗಿ ನರಕಕ್ಕಿಳಿವ ಚಾಂಡಾಲರಿಂದ ವಿಪ್ರರ ಸತ್ಪಾತ್ರರೆಂದಾರಾಧಿಸುವರ ನರಕದ ಕುಳಿಯೊಳು ಮೆಟ್ಟಿ ನರಕಾಗ್ನಿಯಿಂದ ಸುಡುತಿರ್ಪ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
Transliteration Bhaktibhāṇḍada śivabhaktara niṣēdhava māḍuva karmabhāṇḍada dvijaru nīvu kēḷibhō: `Satyaṁ bhō brūta pan̄caprāṇa indriyanigrahaʼmendōdi guddi guddi hōtana timbudāvācāravo? `Pitāmahaśca vaiśyastu kṣatriyō parayō hariḥ brāhmaṇō bhagavān rudraḥ sarvēṣvya ttamōttamaḥ emba śrutiya nōḍi, tam'ma kuladaivavaha brāhmaṇanaha rudrana nindisi, tamaginda kīḷujātiyaha kṣatriya hariya ārādhisuva kulahīnaru nīvu kēḷibhō: `Janmanā jāyatē śūdraḥ karmaṇā dvijamucyatēʼ `vēdābhyāsēna viprastu brahmaṇā carantīti brāhmaṇaḥʼ emba śrutiyanōdi, parabrahmanantaha śivaliṅgapūjeyanācarisi brāhmaṇatvavanai[dade] śatayāgaṅgaḷa māḍi śūdranaha indratvava bayasuva adhamaru nīvu kēḷibhō: `Janmanā jāyatē śūdraḥ mātā sā prathamaṁ śūdrāṇi nacōpadēśaḥ gāyatrī na ca maun̄jī na ca kriyāʼ endudāgi, dīkṣeyillade satiśūdragittige huṭṭidavanoḍanumba anācārige elliyado brāhmaṇatva? Āva jātiyavanādarēnu śivabhaktane brāhmaṇa. Adakke sākṣi: . `Tapasā brāhmaṇōsbhavat sāṅkhyāyana mahāmuniḥ| tapasā brāhmaṇōsbhavat gautamastu mahāmuniḥ| jātiṁ na kārayēttēṣu śrēṣṭhāḥ samabhavanstataḥ| tajjātirabhavattēna' endudāgi, tam'ma tam'ma gōtraṅgaḷe sākṣiyāgi sāruttiralu kubhrameyātakke? Śvapacōspi muniśrēṣṭhaḥ śivabhaktisamanvitaḥ| śivabhaktivihīnastu śvapacōspi dvijādhamaḥ|| endudāgi śivabhaktane kulaja, śivabhakti illadavane śvapacanendariyada Ajñānigaḷu nīvu kēḷibhō! `Ēka ēva rudrō na dvitīyāyatasthē' endu vēdavanōdi `paśupatayē namaḥ' endā rudravanōdi śivane pati mikkina daivaṅgaḷella paśugaḷembuda tiḷidu matteyū ī dvijaru kāṇalariyaru. Haraharanondeyemba naragurigaḷu nīvu kēḷibhō! Pārāśa[ra] purāṇē: Ādau rudrāṅgamutpattiḥ mukhē brāhmaṇamīśvaraḥ viṣṇuṁ kṣatriyamityāhurbāhunā ca avasthitaḥ vaiśyaśca brahmā ityāhuḥ liṅgādēva avasthitaḥ| surapō śūdrayityāhuḥ dēvapādādavisthitaḥ|| endudāgi, Rudrana mukhadalli huṭṭidavane brāhmaṇa, mikkāda viprarellaru r̥ṣigōtradalli huṭṭidaru. Ā r̥ṣimūlada viprarellaru adhamajāti adhamajātiyādarēnu? Rudrabhaktarāda kāraṇa brāhmaṇarādaru. Ī varmavanariyada cāṇḍāla viprargēnū sambandhavilla. Kāka rudrana mukhadalli udbhavavembudakke śvānasūkararūpē ca prētapiṇḍa pradānataḥ| prētatvaṁ ca sadā syāt tathā dharmēṇa lupyatē|| endudāgi āgamārthavanariyade, prētapiṇḍavanikkuva pātakaru, [Prāṇāyasvāhā]apānāya svāhā, vyānāya svāhā udānāya svāhā, samānāya svāhā' endu bhūtabaliya bekku nāyige hāki mikka bhūtaśēṣava komba akulajaru, nīvu kēḷibhō! `Vasurūpō madhyapiṇḍaḥ putrapautrapravardhanaḥ' endu, rudraprasādavane koṇḍu rudrapiṇḍadinda huṭṭi, dīkṣākāladalli bhasitava dharisi, brahmakapālapātreyaṁ piḍidu, palāśakaṅkāḷadaṇḍamaṁ piḍidu, `bhavatī bhikṣāṁ dēhi'yendu bhikṣamaṁ bēḍi pitr̥kāryadalli `viśvē dēvānstarpayāmi'yendarcisi, Maraṇakāladalli rudrabhūmiyalli rudrāgniyinda dahana rudravāhanada bālaviḍidu svargavaneydidaru, rudrabhaktivirud'dha vicārahīnaru. `Tryāyuṣaṁ jamadagnēḥ kaśyapasya triyāyuṣaṁ, agastyasya triyāyuṣaṁ(tanmēstu)triyā śatasayuṣaṁʼ endu sakala'r̥ṣigaḷu śrī vibhūtiyanu dharisi, bahaḷāyuṣyamaṁ paḍedarendu matteyu yajus'sinalli dīkṣeyanaidalli, `bhūtivānśca priyaṁ hōtavyaṁ'yendu, śrīvibhūtiyane dharisahēḷittu vēdavu. `Gōpī malinadhārī tu śivaṁ spr̥śati yō dvijaḥ| tadaikavinśatikulaṁ sākṣāttu narakaṁ vrajēt'|| endu, gōpi malina candanavaniṭṭu, pātakaru[va] śivaliṅga muṭṭidare tam'mippattondu kulasahita kēḍillada narakadalli bīḷuvarendariyade muṭṭiyaniṭṭa bhraṣṭaru, matsya kūrma varāha nārasinha ī nālkū avatāradalli nīrinda bali dhāreyaneredanembudanaridu, viṣṇuvina pādadalli gaṅge huṭṭitemba vicārahīnaru `viyadviṣṇupadaṁ prōktaṁ punsyākāśavihāyasī| vihāyasōspi nākōspi dyurapi syāttidavyayaṁ'|| endu Nighaṇṭinalli ākāśada hesaru viṣṇupadi, ākāśagaṅge munnaluṇṭembudanaritu, viṣṇuvina kālalli gaṅge huṭṭitemba duṣṭaru, vēdakke nelegaṭṭu ōṅkāra, brāhmaṇakke nelegaṭṭu gāyatriyalli śivane daivavendittu. `Ōṁ bhūḥ ōṁ bhuvaḥ ōṁ suvaḥ ōṁ mahaḥ ōṁ janaḥ ōṁ tapaḥ ōṁ satyaṁ ōṁ tatsaviturvarēṇyaṁ bhargō dēvasya dhīmahi dhiyō yō naḥ pracōdayātʼ hara haribhaktanendanisuva vicārahīnaru nīvu kēḷibhō! Hari śivana bhaktanembuvadakke sāvirakamala koratege tanna nayana kamalamaṁ kaḷedu śivanaṅghrigarpisi, Cakramaṁ paḍedanendu mahimadalli ʼharistē sāhasraṁ kamalabaliyādhāya padayōḥ' endōdi mareda matibhraṣṭaru nīvu kēḷibhō! Harane karta, hariye bhr̥tyanembudakke rāmapratiṣṭhe śivaliṅga[da] mūrtigaḷiṁ kāṇire, kaṇḍu tiḷiyalariyada hulamanujaru śrīrāmana guru vaśiṣṭha hampeyalli virūpākṣaliṅgana bhaktanendaridu, kr̥ṣṇāviṣṇuvina guru upaman'yu ahipuradalli sōmēśvaraliṅgana bhr̥tyanembudanaridu, intu bhr̥tyana śiṣyaṅge kartana sariyemba karmacaṇḍālaru nīvu kēḷibhō! `Asaṅkhyakōṭibrahmāṇāṁ kōṭiviṣṇugaṇaṁ tataḥ| gaṅgāvāluka samau hētau kin̄cidajñāḥ na mahēśvarāt|| endu rudrana eveyāḍuvanitakke lekkavillada kōṭi brahmaviṣṇuru sattuhōdarendu ōdi tiḷidu intha huludaivaṅgaḷa `mr̥tyun̄jayaḥ nityaḥ ēkō dēvaḥ na dvitīyaḥ' endenisuva śivage sariyandenisuva bhaviviprarige tāvu ōduva, vēdāgamaṅgaḷu tamage hageyāgi naḍeyondu pari nuḍiyondu pari āgihudu. Adentendare:Gautama dadhīci bhr̥guvādiyāgi hiriyarugaḷē śāpadinda śāpahatarāgi śivadrōhigaḷāgi Narakakkiḷiva cāṇḍālarinda viprara satpātrarendārādhisuvara narakada kuḷiyoḷu meṭṭi narakāgniyinda suḍutirpa uriliṅgapeddipriya viśvēśvara.