•  
  •  
  •  
  •  
Index   ವಚನ - 205    Search  
 
ನಾವು ಮೀರಿದ ಸ್ಥಲದ ವಿರಕ್ತರೆಂದು ಹೇಳುವ ಅಣ್ಣಗಳಿರಾ ನೀವು ಮೀರಿದ ಸ್ಥಲದ ವಿರಕ್ತರಾದ ಬಗೆಯ ಹೇಳಿರಣ್ಣ. ಅರಿಯದಿರ್ದಡೆ ಹೇಳಿಹೆ ಕೇಳಿರಣ್ಣ, ಮೀರಿನಿಂದ ವಿರಕ್ತನ ವಿಚಾರದ ಭೇದವ. ಅನಾದಿ ಚಿದ್ಬಿಂದುವ ಅಧೋದ್ವಾರದಲ್ಲಿ ಬೀಳಗೊಡದೆ, ಸದ್ಗುರು ಕರುಣಕಟಾಕ್ಷೆಯಿಂದ ಮಹಾಮಂತ್ರವ ಪಡೆದು, ಆ ಚಿನ್ಮಂತ್ರ ಬಲದಿಂದ ಊರ್ಧ್ವಕ್ಕೆ ಮುಖವ ಮಾಡಿ, ಮೇಲುಗಿರಿ ಸಿಂಹಾಸನದಲ್ಲಿ ಮೂರ್ತಗೊಂಡಿರುವ ಪರಶಿವಲಿಂಗದ ಮಹಾಬೆಳಗಿನೊಳಗೆ ಏಕಾರ್ಥವ ಮಾಡಬೇಕು. ಜಿಹ್ವೆಯ ತುದಿಯ ಅಜ್ಞಾನದ ಹುಸಿ ಕುಶಬ್ದ ಕುರುಚಿಯ ನೀಗಬೇಕು. ಸದ್ಗುರುಮುಖದಿಂದ ನಿಜನುಡಿ, ಘನಪಾದೋದಕ, ಪ್ರಸಾದಮಂತ್ರವ ಪಡೆದು, ಸದ್ಧರ್ಮರೂಪದಿಂದಿರಬೇಕು. ಸರ್ವಾಚಾರಸಂಯುಕ್ತವಾದ ಭಕ್ತನೆ ನಿಜಮುಕ್ತಿಮಂದಿರವೆಂದು, ಭಾವ ಮನ ಕಾಯ ತುಂಬಿ, ಪರಿಪೂರ್ಣ ತೃಪ್ತನಾದಾತನೆ ಮೀರಿದ ಸ್ಥಲದ ವಿರಕ್ತ ನೋಡಾ, ಕಲಿದೇವರದೇವ.
Transliteration Nāvu mīrida sthalada viraktarendu hēḷuva aṇṇagaḷirā nīvu mīrida sthalada viraktarāda bageya hēḷiraṇṇa. Ariyadirdaḍe hēḷihe kēḷiraṇṇa, mīrininda viraktana vicārada bhēdava. Anādi cidbinduva adhōdvāradalli bīḷagoḍade, sadguru karuṇakaṭākṣeyinda mahāmantrava paḍedu, ā cinmantra baladinda ūrdhvakke mukhava māḍi, mēlugiri sinhāsanadalli mūrtagoṇḍiruva Paraśivaliṅgada mahābeḷaginoḷage ēkārthava māḍabēku. Jihveya tudiya ajñānada husi kuśabda kuruciya nīgabēku. Sadgurumukhadinda nijanuḍi, ghanapādōdaka, prasādamantrava paḍedu, sad'dharmarūpadindirabēku. Sarvācārasanyuktavāda bhaktane nijamuktimandiravendu, bhāva mana kāya tumbi, paripūrṇa tr̥ptanādātane mīrida sthalada virakta nōḍā, kalidēvaradēva.