ವೇದಂಗಳ ಉತ್ತರದಲ್ಲಿ, ಶಾಸ್ತ್ರದ ಮಧ್ಯದಲ್ಲಿ,
ಪುರಾಣದ ಮೊದಲಿನಲ್ಲಿ, ಪೂರ್ವ ಆದಿಯ ಇಷ್ಟದಲ್ಲಿ,
ಮಧ್ಯಭಾವ ಆತ್ಮನಲ್ಲಿ, ಉತ್ತರ ತುತ್ತತುದಿಯಲ್ಲಿ,
ಮೆಟ್ಟಿ ನೋಡಲಾಗಿ ಹಿಂದೆಸೆಯಲ್ಲಿ ಕಂಡೆ,
ಸ್ಥೂಲಸೂಕ್ಷ್ಮಕಾರಣ ಈ ಮೂರ.
ಮುಂದೆಸೆಯಲ್ಲಿ ಕಂಡೆ ಭೂತಭವಿಷ್ಯದ್ವರ್ತಮಾನವ.
ಹಿಂದೆಸೆ ಮುಂದೆಸೆಯ ಬಿಟ್ಟು,
ಊರ್ಧ್ವಾಂಗ ಅಭಿಮುಖವಾಗಿ ನೋಡಲಾಗಿ ಮಹದಾಕಾಶವ ಕಂಡೆ.
ಮಹದಾಕಾಶದ ಮಧ್ಯದಲ್ಲಿ ಒಂದು ನಿಃಕಲತತ್ವ.
ಆ ನಿಃಕಲತತ್ವದ ರೂಪು, ಆರೋಹ ಅವರೋಹವಾಗಿ ಎಡೆಯಾಡುತ್ತಿಪ್ಪುದು.
ಅದು ಅಂಗಕ್ಕೆ ಲಿಂಗವಾಗಿ, ಆತ್ಮಂಗೆ ಅರಿವಾಗಿ,
ಹಿಂದು ಮುಂದು ಒಂದೆಯಾಗಿಪ್ಪ ನಿಜ ನಿಂದ ನಿಲವು.
ನಿಃಕಳಂಕ ಮಲ್ಲಿಕಾರ್ಜುನನು ದ್ವಂದ್ವವಳಿದ ನಿರಂಗ.
Transliteration Vēdaṅgaḷa uttaradalli, śāstrada madhyadalli,
purāṇada modalinalli, pūrva ādiya iṣṭadalli,
madhyabhāva ātmanalli, uttara tuttatudiyalli,
meṭṭi nōḍalāgi hindeseyalli kaṇḍe,
sthūlasūkṣmakāraṇa ī mūra.
Mundeseyalli kaṇḍe bhūtabhaviṣyadvartamānava.
Hindese mundeseya biṭṭu,
ūrdhvāṅga abhimukhavāgi nōḍalāgi mahadākāśava kaṇḍe.
Mahadākāśada madhyadalli ondu niḥkalatatva.
Ā niḥkalatatvada rūpu, ārōha avarōhavāgi eḍeyāḍuttippudu.
Adu aṅgakke liṅgavāgi, ātmaṅge arivāgi,
hindu mundu ondeyāgippa nija ninda nilavu.
Niḥkaḷaṅka mallikārjunanu dvandvavaḷida niraṅga.