ಪ್ರಸಾದಿ ಪ್ರಸಾದಿಗಳೆಂದು ನುಡಿದುಕೊಂಡು ನಡೆಯಬಹುದಲ್ಲದೆ
ಪ್ರಸಾದವ ಕೊಂಬ ಭೇದವನರಿಯರು.
ಕರುಣಿಸು ಮದ್ಗುರವೆ,
ಕೇಳಯ್ಯ ಮಗನೆ :
ಗುರುವಿನಲ್ಲಿ ತನುವಂಚನೆಯಿಲ್ಲದೆ ಕೊಂಬುದು ಶುದ್ಧಪ್ರಸಾದ ;
ಲಿಂಗದಲ್ಲಿ ಮನವಂಚನೆಯಿಲ್ಲದೆ ಕೊಂಬುದು ಸಿದ್ಧಪ್ರಸಾದ ;
ಜಂಗಮದಲ್ಲಿ ಧನವಂಚನೆಯಿಲ್ಲದೆ ಕೊಂಬುದು ಪ್ರಸಿದ್ಧಪ್ರಸಾದ.
ಈ ತ್ರಿವಿಧಲಿಂಗದಲ್ಲಿ ತ್ರಿವಿಧ ವಂಚನೆಯಿಲ್ಲದೆ
ಅವರ ಕರುಣಪ್ರಸಾದವ ಕೊಂಬ ಪ್ರಸಾದಕಾಯಕ್ಕೆ
ಪ್ರಳಯಬಾಧೆಗಳು ಬಾಧಿಸಲಮ್ಮವು ;
ಕರಿ ಉರಗ ವೃಶ್ಚಿಕ-ಇವು ಹೊದ್ದಲಮ್ಮವು;
ಇರುವೆ ಕೆಂಡವು ಹೊದ್ದಲಮ್ಮವು.
ಹೊದ್ದುವ ಪರಿ ಎಂತೆಂದೊಡೆ:
ಲಿಂಗದಲ್ಲಿ ನಿಷ್ಠೆಯಿಲ್ಲ ; ಜಂಗಮದಲ್ಲಿ ಪ್ರೇಮ-ಭಕ್ತಿಯಿಲ್ಲ;
ವಿಭೂತಿ - ರುದ್ರಾಕ್ಷೆಯಲ್ಲಿ ವಿಶ್ವಾಸವಿಲ್ಲ;
ಶಿವಾಚಾರದಲ್ಲಿ ದೃಢವಿಲ್ಲದ ಕಾರಣ
ತಾಪತ್ರಯಂಗಳು ಕಾಡುವವು ಎಂದಿರಿ ಸ್ವಾಮಿ,
'ಮತ್ತೆ ನಂಬುಗೆಯುಳ್ಳ ಪ್ರಸಾದಿಗಳಿಗೆ ವ್ಯಾಧಿಯೇಕೆ ಕಾಡುವವು?
ಸದ್ಗುರುಮೂರ್ತಿಯೆ ಕರುಣಿಸು ಎನ್ನ ತಂದೆ'.
ಕೇಳೈ ಮಗನೆ:
ಭಕ್ತಗಣಂಗಳಿಗೆ ವಂದಿಸಿ ನಿಂದಿಸಿ
ಹಾಸ್ಯ ದೂಷಣವ ಮಾಡಿದಡೆ
ಅದೇ ವ್ಯಾಧಿರೂಪಾಗಿ ಕಾಡುವದು;
ತಲೆಶೂಲೆ ಹೊಟ್ಟೆಶೂಲೆ ನಾನಾತರದ ಬೇನೆಯಾಗಿ ಕಾಡುವವು.
ಆ ಭಕ್ತಗಣಂಗಳಿಗೆ ತಾನು ನಿಂದಿಸಿದುದ ತಿಳಿದು,
ಅವರಿಗೆ ತ್ರಿಕರಣಶುದ್ಧವಾಗಿ ಸೇವೆಯ ಮಾಡಿ,
ಅವರ ಕರುಣವ ಹಡೆದಡೆ
ಆಗ ಅವರಿಗೆ ವ್ಯಾಧಿ ಬಿಟ್ಟು ಹೋಗುವವು ಎಂದಾತ
ನಮ್ಮ ಶಾಂತಕೂಡಲಸಂಗಮದೇವ
Transliteration Prasādi prasādigaḷendu nuḍidukoṇḍu naḍeyabahudallade
prasādava komba bhēdavanariyaru.
Karuṇisu madgurave,
kēḷayya magane:
Guruvinalli tanuvan̄caneyillade kombudu śud'dhaprasāda;
liṅgadalli manavan̄caneyillade kombudu sid'dhaprasāda;
jaṅgamadalli dhanavan̄caneyillade kombudu prasid'dhaprasāda.
Ī trividhaliṅgadalli trividha van̄caneyillade
avara karuṇaprasādava komba prasādakāyakke
praḷayabādhegaḷu bādhisalam'mavu;
kari uraga vr̥ścika-ivu hoddalam'mavu;
iruve keṇḍavu hoddalam'mavu.
Hodduva pari entendoḍe:
Liṅgadalli niṣṭheyilla; jaṅgamadalli prēma-bhaktiyilla;
vibhūti - rudrākṣeyalli viśvāsavilla;
śivācāradalli dr̥ḍhavillada kāraṇa
tāpatrayaṅgaḷu kāḍuvavu endiri svāmi,
'matte nambugeyuḷḷa prasādigaḷige vyādhiyēke kāḍuvavu?
Sadgurumūrtiye karuṇisu enna tande'.
Kēḷai magane:
Bhaktagaṇaṅgaḷige vandisi nindisi
hāsya dūṣaṇava māḍidaḍe
adē vyādhirūpāgi kāḍuvadu;
taleśūle hoṭṭeśūle nānātarada bēneyāgi kāḍuvavu.
Ā bhaktagaṇaṅgaḷige tānu nindisiduda tiḷidu,
avarige trikaraṇaśud'dhavāgi sēveya māḍi,
avara karuṇava haḍedaḍe
āga avarige vyādhi biṭṭu hōguvavu endāta
nam'ma śāntakūḍalasaṅgamadēva