ಪ್ರಸಾದಿಯ ಜ್ಞಾನಿಸ್ಥಲ - ಕರ್ಮ
ಪಂಡಿತನಾಗಲಿ, ಮೂರ್ಖನಾಗಲಿ ಸಂಚಿತಕರ್ಮ, ಉಂಡಲ್ಲದೆ ಬಿಡದು,
ಪ್ರಾರಬ್ಧಕರ್ಮ ಭೋಗಿಸಿದಲ್ಲದೆ ಹೋಗದೆಂದು
ಶ್ರುತಿ ಸಾರುತ್ತೈದಾವೆ, ನೋಡಾ,
ತಾನಾವ ಲೋಕದೊಳಗಿದ್ದರೆಯೂ ಬಿಡದು.
ಕರ್ಮಫಲಗೂಡಿ ಕೂಡಲಸಂಗಮದೇವಂಗೆ
ಆತ್ಮನೈವೇದ್ಯವ ಮಾಡಿದವನೆ ಧನ್ಯ.
Transliteration Paṇḍitanāgali, mūrkhanāgali san̄citakarma, uṇḍallade biḍadu,
prārabdhakarma bhōgisidallade hōgadendu
śruti sāruttaidāve, nōḍā,
tānāva lōkadoḷagiddareyū biḍadu.
Karmaphalagūḍi kūḍalasaṅgamadēvaṅge
ātmanaivēdyava māḍidavane dhan'ya.
Manuscript
English Translation 2 Let one be scholar or a fool,
The stored-up karma will not leave
Unless he can consume it.
Look you, the Revelations say
Your current karma will not go
Unless you use it up-it will not leave
In whatever world you be.
Blessed is he
Who makes an offering of his soul
To Lord Kūḍala Saṅgama
Along with his karma's fruit.
Translated by: L M A Menezes, S M Angadi
Hindi Translation पंडित हो या मूर्ख
संचित कर्म बिना भोगे नहीं छूटता;
श्रुति घोषणा करती है,
बिना भोगे प्रारब्ध कर्म नहीं छूटता;
किसी लोक में रहने पर भी कर्म-फल से मुक्ति नहीं।
वही धन्य है जो अपने कर्म-फल समेत
कूडलसंगमदेव को आत्मार्पण करता है॥
Translated by: Banakara K Gowdappa
Telugu Translation పండితుడై నా; పామరుడై నా; సంచితకర్మ పొందకతప్పదురా;
ప్రారబ్ధకర్మ మనుభవింపక తప్పదురా; వినవోయీ
శ్రుతిమాట; ఏ లోక మందుండినా; ఎట దాగినా విడదు;
కర్మఫలము కుడిచి సంగని కాత్మార్పణ సేయువాడే ధన్యుడు
Translated by: Dr. Badala Ramaiah
Tamil Translation பண்டிதனாயினும் அறிவிலியாயினும்
முன்செய்த தீவினைகளை துய்க்காமல் விடவியலாது
முன்செய்த தீவினைகள் துய்க்காமல்
அகல்வதில்லை என வேதம் கூறுகிறது
எந்த உலகிலிருப்பினும் விடாது
கர்ம பலன்களைக் கூட்டி, கூடல சங்கனுக்கு
ஆன்ம நிவேதனம் செய்யின் புண்ணியசாலி ஐயனே.
Translated by: Smt. Kalyani Venkataraman, Chennai
Marathi Translation
पंडित असो, मूर्ख असो, संचितकर्म भोगले पाहिजे.
प्रारब्धकर्म भोगल्याविना सुटत नाही, असे श्रुती म्हणते पहा.
ते कोणत्याही लोकात असेल तरी सुटत नाही.
कर्मफळा बरोबर कूडलसंगमदेवाला
आत्मनैवेद्य अर्पण करणारे धन्य होय.
Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಬಸವಣ್ಣನವರು ಕರ್ಮ ಎಂಬ ಪದವನ್ನು ಹಿಂದಿನ ಜನ್ಮದಲ್ಲಿ ಮಾಡಿದ ಕರ್ಮದ ಪಾಪದ ಫಲವೆಂಬ ಅರ್ಥದಲ್ಲಿ (ವಚನ 19, 861) ಬಳಸಿರುವರಾದರೂ –ಅದನ್ನು ಸಂಚಿತ ಪ್ರಾರಬ್ಧ ಆಗಾಮಿ ಎಂದು ವಿಭಜಿಸಿ ಹೆಸರು ಹಿಡಿದು (ಇನ್ನೆಲಿಯೂ) ಬಳಸಿಲ್ಲ. ಮತ್ತು ಸಂಚಿತಕರ್ಮವೇ ಅಲ್ಲ ಪ್ರಾರಬ್ಧಕರ್ಮವೂ ಭೋಗಿಸಿದಲ್ಲದೆ ಬಿಡದೆಂಬ ಕಲ್ಪನೆಯೂ ಅವರಿಗಿರಲಿಲ್ಲ (ವಚನ, 142-178, 474, 510) ಈ ಯಾವ ಕರ್ಮವನ್ನಾದರೂ ಪೂಜೆಯಿಂದ ಪ್ರಸಾದದಿಂದ ಪರಿಹರಿಸಿಕೊಳ್ಳಬಹುದೆಂದಿರುವರು ಅವರು : “ಕರ್ಮ ಹರಿಯದೊಡಾ ಪೂಜೆಯೇಕೋ ? (ವಚನ 803), “ನಿಮ್ಮ ಪಾದವ ಮುಟ್ಟಿ ಎನ್ನ ಕರ್ಮ ಹರಿಯಿತ್ತು” (ವಚನ 796) ಎಂದು ಮುಂತಾಗಿ.
ಅಲ್ಲದೆ ವೈದಿಕರ ಕಲ್ಪನೆಯ ಕರ್ಮಸ್ವರೂಪವನ್ನೂ ಆ ಕರ್ಮಮಾರ್ಗವನ್ನೂ ಬಸವಣ್ಣನವರು ಸಂಪೂರ್ಣವಾಗಿ ತಿರಸ್ಕರಿಸಿರುವರು (ವಚನ-209, 363, 384, 577, 625, 751). ಅವರು ಕೆಲವೆಡೆ ಕಾಯಕವೆಂಬ ಅರ್ಥದಲ್ಲಿ ಕರ್ಮಫಲವನ್ನು ಬಳಸಿರುವರಾದರೂ (ವಚನ 711) ಆ ಕರ್ಮವನ್ನು ಅಜೇಯವಾದೊಂದು ಪಿಡುಗೆಂಬ ಅರ್ಥದಲ್ಲಿ ಬಳಸಿಯೇ ಇಲ್ಲ. ಕುಪ್ರಸಿದ್ಧವಾದ ಈ ಕರ್ಮದೊಡನೆ ಅವರು ಹೋರಾಡುವೆನೆಂದಿರುವರೇ ಹೊರತು –ಅದಕ್ಕೆ ಬಲಿಬೀಳುವ ಮಾತೇ ಇಲ್ಲ (ವಚನ-702)
ವಸ್ತು ಸ್ಥಿತಿ ಹೀಗಿರುವಲ್ಲಿ “ಸಂಚಿತಕರ್ಮವ ಉಂಡಲ್ಲದೆ ಬಿಡದು, ಪ್ರಾರಬ್ಧಕರ್ಮವ ಭೋಗಿಸಿದಲ್ಲದೆ ಹೋಗದೆಂದು ಶ್ರುತಿ ಸಾರುತ್ತೈದಾವೆ ನೋಡಾ” ಎಂಬಂಥ ವೈದಿಕ ಕರ್ಮಸಿದ್ಧಾಂತದನುಮತದ ಮಾತುಗಳು ಬಸವಣ್ಣನವರದು ಹೇಗಾದವು? ಮತ್ತು –“ತಾನಾವ ಲೋಕದೊಳಗಿದ್ದರೆಯೂ ಬಿಡದು ಕರ್ಮ” ಎಂಬಂಥ ಕರ್ಮಗುಲಾಮತನ ಬಸವಣ್ಣನವರದಲ್ಲವೇ ಅಲ್ಲ.
“ಕರ್ಮಫಲಗೂಡಿ ಕೂಡಲ ಸಂಗಮದೇವಂಗೆ ಆತ್ಮನೈವೇದ್ಯವ ಮಾಡಿದವನೇ ಧನ್ಯ”ಎಂಬ ಭಾವ ಬಸವಣ್ಣನವರದೇ ಎನ್ನಬಹುದಾದರೂ-ಅದರ ಅಭಿವ್ಯಕ್ತಿಪ್ರಕಾರ ಮತ್ತು ಅದಕ್ಕೆ ಹಿನ್ನೆಲೆಯಾಗಿ ಚಿತ್ರಿಸಿರುವ ವೈದಿಕ ಕರ್ಮದ ರಣರಣಕ ಅವರದಲ್ಲವೆಂಬುದನ್ನು ಮನಗಾಣಬೇಕು.
ಈ ವಚನ “ಪಂಡಿತನಾಗಲಿ ಮೂರ್ಖನಾಗಲಿ”ಎಂದು ಪ್ರಾರಂಭವಾಗಿರುವುದೇ ನಮ್ಮನ್ನು ಬಸವಣ್ಣನವರ ನುಡಿಗಟ್ಟಿನಿಂದ ದೂರ ಒಯ್ದಂತೆನಿಸುವುದು. ಅವರು ಪಂಡಿತ*ಮೂರ್ಖ ಪದಗಳನ್ನು ಜೋಡಿಸಿಯಾಗಲಿ ಬಿಡಿಸಿಯಾಗಲಿ ಮತ್ತೆಲ್ಲಿಯೂ ಬಳಸಿರುವುದಿಲ್ಲ.
ಆದ್ದರಿಂದ-“ಮಯಿ ಸರ್ವಾಣಿ ಕರ್ಮಾಣಿ ಸಂನ್ಯಸ್ಯಾಧ್ಯಾತ್ಮಚೇತಸಾ| ನಿರಾಶೀರ್ನಿರ್ಮಮೋ ಭೂತ್ವಾ ಯುಧ್ಯಸ್ವ ವಿಗತಜ್ವರಃ (3-30) ಎಂದು ಮುಂತಾದ ಭಗವದ್ಗೀತೆಯ ಮಾತುಗಳನ್ನು ತಿದ್ದಿ –ಕರ್ಮಸಿದ್ಧಾಂತದೊಡನೆ ಬೆರಸಿ ಈ ವಚನವನ್ನು ಸನಾತನೀ ವೀರಶೈವನೊಬ್ಬನು ಬರೆದು ಬಸವಣ್ಣನವರ ಹೆಸರಿನಲ್ಲಿ ಪ್ರಕ್ಷೇಪಿಸಿರುವನು.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು