ಕಾಶಿಯಲ್ಲಿ ಗೋವಧೆಯ ಮಾಡಿ ಗುರುಕರುಣವ ಪಡೆದು
ಪರವನರಿಯಬಲ್ಲಾತನೇ ಯೋಗಿ.
ತ್ರಿವೇಣಿಸಂಗಮದಲ್ಲಿ ಮಂಡೋದರಿಯ ಕೊಂದು,
ಮನನ ತ್ರಾಣಮಂತ್ರವನನುಸಂಧಾನಿಸಬಲ್ಲಾತನೇ ಯೋಗಿ.
ಶ್ರೀಶೈಲದಲ್ಲಿ ಶಿವಸ್ತುತಿಯ ಕೇಳಿ, ಹಯವ ಹತಮಾಡಿ,
ಮನವಳಿದಿರಬಲ್ಲಾತನೇ ಯೋಗಿ.
ಪ್ರಯಾಗದಲ್ಲಿ ಉರಗನ ಕೊಂದು,ಫಣಾಮಣಿಯ ಸೆಳೆದುಕೊಂಡು,
ಆ ಮಣಿಯ ಬೆಳಗಿನೊಳಗೆ ಸುಳಿದಾಡಬಲ್ಲಾತನೇ ಯೋಗಿ.
ಕೇದಾರದಲ್ಲಿ ಮತ್ಸ್ಯವ ಕೊಂದು, ಮರಣವ ಗೆಲಿದು,
ಪರಮ ಪದದಲ್ಲಿರಬಲ್ಲಾತನೇ ಯೋಗಿ.
ಇಂತೀ ಪುಣ್ಯಕ್ಷೇತ್ರಂಗಳಲ್ಲಿ ಮಾಡಬಾರದುದ ಮಾಡಿ,
ನೋಡಬಾರದುದ ನೋಡಿ, ಕೇಳಬಾರದುದ ಕೇಳಿ,
ಶಿವನೊಲಿಸಿ ಶಿವನೊಳಗಾದರು
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ ನಿಮ್ಮ ಶರಣರು.
Transliteration Kāśiyalli gōvadheya māḍi gurukaruṇava paḍedu
paravanariyaballātanē yōgi.
Trivēṇisaṅgamadalli maṇḍōdariya kondu,
manana trāṇamantravananusandhānisaballātanē yōgi.
Śrīśailadalli śivastutiya kēḷi, hayava hatamāḍi,
manavaḷidiraballātanē yōgi.
Prayāgadalli uragana kondu,phaṇāmaṇiya seḷedukoṇḍu,
ā maṇiya beḷaginoḷage suḷidāḍaballātanē yōgi.
Kēdāradalli matsyava kondu, maraṇava gelidu,
parama padadalliraballātanē yōgi.
Intī puṇyakṣētraṅgaḷalli māḍabāraduda māḍi,
nōḍabāraduda nōḍi, kēḷabāraduda kēḷi,
śivanolisi śivanoḷagādaru
nijaguru svatantrasid'dhaliṅgēśvarā nim'ma śaraṇaru.