ಮರ್ತ್ಯಲೋಕದ ಮಹಾಗಣಂಗಳು ನೀವು ಕೇಳಿರಯ್ಯ,
ಅದೇನು ಕಾರಣವೆಂದರೆ,
ಗುರುವೆನ್ನದು, ಲಿಂಗವೆನ್ನದು,
ಜಂಗಮವೆನ್ನದು, ಪ್ರಸಾದವೆನ್ನದು.
ಈ ಚತುರ್ವಿಧವು ಎನ್ನದಾದ ಕಾರಣದಿಂದ,
ಇದರ ಹಾನಿವೃದ್ಧಿ ಎನ್ನದಾದ ಕಾರಣದಿಂದ,
ಕಂಡುದ ನುಡಿವೆನಲ್ಲದೆ, ಜಗದಂತೆ
ಮಿಥ್ಯಾಳಾಪವಾಗಿ ನುಡಿವನಲ್ಲ.
ಮುಂದೆ ಸತ್ತುಗಿತ್ತು ಹುಟ್ಟುವನಲ್ಲ,
ಮುಂದೆ ಹೊತ್ತುದ ಹುಸಿಮಾಡಿ,
ಮತ್ತೊಂದು ದಿಟ ಮಾಡುವನಲ್ಲ.
ಅದನೇನು ಕಂಡವರು ಕಂಡಂತೆ ನುಡಿವರು.
ಉಂಡವರು ಉಂಡಂತೆ ತೇಗುವರು
ಎಂಬುದ ನೀವು ಅರಿದುಕೊಳ್ಳಿ.
ಪಂಚಾಚಾರಕ್ಕೊಳಗಾದ ಶಿವಭಕ್ತರು ಎಮ್ಮಲ್ಲಿ
ಹಿಂಚುಮುಂಚು ನೋಡಬೇಡ.
ನಿಮ್ಮ ಪ್ರಪಂಚನೆಯ ಹರಿದುಕೊಂಡು,
ನಿಮ್ಮಲ್ಲಿರ್ದ ಭವಿಗಳನೆ ಭಕ್ತರ ಮಾಡಿ
ವಿವರಿಸಿ ನೋಡಲಾಗಿ,
ನಾ ನೀನೆಂಬುವದಕ್ಕಿಲ್ಲ.
ಆ ಉಭಯದ ಗೊತ್ತ ಮೆಟ್ಟಲಾಗಿ,
ಭಕ್ತಜಂಗಮ ಒಂದೇ ಅಂಗ,
ಅದಕ್ಕೆ ನಿಶ್ಚಿಂತ ನಿಜೈಕ್ಯವು.
ಆ ನಿಲುವಿಂಗೆ ನಮೋ ನಮೋ ಎನುತಿರ್ದೆ,
ಬಸವಪ್ರಿಯ ಕೂಡಲಚೆನ್ನಸಂಗನಬಸವಣ್ಣಾ.
Transliteration Martyalōkada mahāgaṇaṅgaḷu nīvu kēḷirayya,
adēnu kāraṇavendare,
guruvennadu, liṅgavennadu,
jaṅgamavennadu, prasādavennadu.
Ī caturvidhavu ennadāda kāraṇadinda,
idara hānivr̥d'dhi ennadāda kāraṇadinda,
kaṇḍuda nuḍivenallade, jagadante
mithyāḷāpavāgi nuḍivanalla.
Munde sattugittu huṭṭuvanalla,
munde hottuda husimāḍi,
mattondu diṭa māḍuvanalla.
Adanēnu kaṇḍavaru kaṇḍante nuḍivaru.
Uṇḍavaru uṇḍante tēguvaru
embuda nīvu aridukoḷḷi.
Pan̄cācārakkoḷagāda śivabhaktaru em'malli
Hin̄cumun̄cu nōḍabēḍa.
Nim'ma prapan̄caneya haridukoṇḍu,
nim'mallirda bhavigaḷane bhaktara māḍi
vivarisi nōḍalāgi,
nā nīnembuvadakkilla.
Ā ubhayada gotta meṭṭalāgi,
bhaktajaṅgama ondē aṅga,
adakke niścinta nijaikyavu.
Ā niluviṅge namō namō enutirde,
basavapriya kūḍalacennasaṅganabasavaṇṇā.