ಗುರುಶಿಷ್ಯ ಸಂಬಂಧಕೆ ಹೋರಾಡಿ,
ಧರೆಯೆಲ್ಲ ಬಂಡಾದರು ನೋಡಾ.
ಗುರುವಿನ ಭವವ ಶಿಷ್ಯನರಿಯ,
ಶಿಷ್ಯನ ಭವವ ಗುರುವರಿಯ.
ಜ್ಞಾನಹೀನ ಗುರುವಿಂಗೆ ಜ್ಞಾನಹೀನ ಶಿಷ್ಯನಾದರೆ
ಅವರ ಪಾತಕಕೆ ಕಡೆ ಏನಯ್ಯಾ?
ಸಾಕ್ಷಿ:
ಜ್ಞಾನಹೀನಗುರೋ ಪ್ರಾಪ್ತಂ ಶಿಷ್ಯಜ್ಞಾನಂ ನ ಸಿದ್ಧತಿ |
ಮೂಲಚ್ಛಿನ್ನೇ ಯಥಾವೃಕ್ಷೇ ಗಂಧಃ ಪುಷ್ಪಂ ಫಲಂ ತಥಾ ||''
ಎಂದುದಾಗಿ,
ಹೀಗೆಂಬುದನರಿಯದೆ, ಹೊನ್ನು ವಸ್ತ್ರದಾಸೆಗೆ
ಲಿಂಗವ ಮಾರಿಕೊಂಡುಂಬ ಗುರು ಶಿವದ್ರೋಹಿ,
ಲಿಂಗವ ಕೊಂಬ ಶಿಷ್ಯ ನರದ್ರೋಹಿ.
ಇಂತಪ್ಪ ಗುರು ಶಿಷ್ಯ ಸಂಬಂಧವ ನೋಡಿ ನೋಡಿ ನಗುತಿದ್ದ
ನಮ್ಮ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
Transliteration Guruśiṣya sambandhake hōrāḍi,
dhareyella baṇḍādaru nōḍā.
Guruvina bhavava śiṣyanariya,
śiṣyana bhavava guruvariya.
Jñānahīna guruviṅge jñānahīna śiṣyanādare
avara pātakake kaḍe ēnayyā?
Sākṣi:
Jñānahīnagurō prāptaṁ śiṣyajñānaṁ na sid'dhati |
mūlacchinnē yathāvr̥kṣē gandhaḥ puṣpaṁ phalaṁ tathā ||''
endudāgi,
hīgembudanariyade, honnu vastradāsege
liṅgava mārikoṇḍumba guru śivadrōhi,
liṅgava komba śiṣya naradrōhi.
Intappa guru śiṣya sambandhava nōḍi nōḍi nagutidda
nam'ma paramaguru paḍuviḍi sid'dhamallināthaprabhuve.