•  
  •  
  •  
  •  
Index   ವಚನ - 67    Search  
 
ಸಚ್ಚಿದಾನಂದ ನಿತ್ಯಪರಿಪೂರ್ಣ ನಿಃಕಲ ಶಿವತತ್ವವು ತನ್ನಿಂದ ತಾನೆ ಅಖಂಡ ಪರಿಪೂರ್ಣ ಗೋಳಕಾಕಾರ ಪರಂಜ್ಯೋತಿಸ್ವರೂಪವಪ್ಪ ಮಹಾಲಿಂಗವಾಯಿತ್ತು ನೋಡಾ. ಆ ಲಿಂಗದ ಮಧ್ಯದಲ್ಲಿ ಬೀಜದಿಂದ ವೃಕ್ಷವು ಉದಯವಾಗುವ ಹಾಂಗೆ, ಆ ಲಿಂಗವು ತನ್ನ ಇಚ್ಛಾಶಕ್ತಿಯ ಕೂಡಿಕೊಂಡು, ಜಗದುತ್ಪತ್ತಿ ಸ್ಥಿತಿ ಲಯಂಗಳಿಗೆ ಕರ್ತುವಾಗಿ, ಸಕಲ ನಿಃಕಲವಾಗಿ, ಪಂಚಮುಖ ದಶಭುಜ ದಶಪಂಚನೇತ್ರ ದ್ವಿಪಾದ ತನುವೇಕ ಶುದ್ಧ ಸ್ಫಟಿಕವರ್ಣದ ಧಾತುವಿನಿಂದ ಒಪ್ಪುತ್ತಿಪ್ಪುದು ಸದಾಶಿವಮೂರ್ತಿ. ಆ ಸದಾಶಿವನ ಈಶಾನ್ಯಮುಖದಲ್ಲಿ ಆಕಾಶ ಪುಟ್ಟಿತ್ತು. ತತ್ಪುರುಷಮುಖದಲ್ಲಿ ವಾಯು ಪುಟ್ಟಿತ್ತು. ಅಘೋರಮುಖದಲ್ಲಿ ಅಗ್ನಿ ಪುಟ್ಟಿತ್ತು. ವಾಮದೇವಮುಖದಲ್ಲಿ ಅಪ್ಪು ಪುಟ್ಟಿತ್ತು. ಸದ್ಯೋಜಾತಮುಖದಲ್ಲಿ ಪೃಥ್ವಿ ಪುಟ್ಟಿತ್ತು. ಮನಸ್ಸಿನಲ್ಲಿ ಚಂದ್ರ, ಚಕ್ಷುವಿನಲ್ಲಿ ಸೂರ್ಯ. ಪರಮಾತ್ಮ ಸ್ವರೂಪವಪ್ಪ ಗೋಪ್ಯಮುಖದಲ್ಲಿ ಆತ್ಮ ಹುಟ್ಟಿದನು. ಇಂತು, ಪೃಥ್ವಿ ಅಪ್ಪು ತೇಜ ವಾಯು ಆಕಾಶ ಚಂದ್ರ ಸೂರ್ಯ ಆತ್ಮನೆಂಬ ಶಿವನ ಅಷ್ಟತನುಮೂರ್ತಿಯೆ ಸಮಸ್ತ ಜಗತ್ತಾಯಿತ್ತು. ಆ ಜಗತ್ತಾವಾವವೆಂದಡೆ: ಚತುರ್ದಶ ಭುವನಂಗಳು, ಸಪ್ತ ಸಮುದ್ರಂಗಳು, ಸಪ್ತ ದ್ವೀಪಂಗಳು, ಸಪ್ತ ಕುಲಪರ್ವತಂಗಳು, ಸಮಸ್ತ ಗ್ರಹರಾಶಿ ತಾರಾಪಥಂಗಳಂ ಗರ್ಭೀಕರಿಸಿಕೊಂಡು ಬ್ರಹ್ಮಾಂಡವೆನಿಸಿತ್ತು. ಇದು ಜಗದುತ್ಪತ್ತಿ ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
Transliteration Saccidānanda nityaparipūrṇa niḥkala śivatatvavu tanninda tāne akhaṇḍa paripūrṇa gōḷakākāra paran̄jyōtisvarūpavappa mahāliṅgavāyittu nōḍā. Ā liṅgada madhyadalli bījadinda vr̥kṣavu udayavāguva hāṅge, ā liṅgavu tanna icchāśaktiya kūḍikoṇḍu, jagadutpatti sthiti layaṅgaḷige kartuvāgi, sakala niḥkalavāgi, pan̄camukha daśabhuja daśapan̄canētra dvipāda tanuvēka śud'dha sphaṭikavarṇada dhātuvininda opputtippudu sadāśivamūrti. Ā sadāśivana īśān'yamukhadalli ākāśa puṭṭittu. Tatpuruṣamukhadalli vāyu puṭṭittu. Aghōramukhadalli agni puṭṭittu. Vāmadēvamukhadalli appu puṭṭittu. Sadyōjātamukhadalli pr̥thvi puṭṭittu. Manas'sinalli candra, cakṣuvinalli sūrya. Paramātma svarūpavappa gōpyamukhadalli ātma huṭṭidanu. Intu, pr̥thvi appu tēja vāyu ākāśa candra sūrya ātmanemba Śivana aṣṭatanumūrtiye samasta jagattāyittu. Ā jagattāvāvavendaḍe: Caturdaśa bhuvanaṅgaḷu, sapta samudraṅgaḷu, sapta dvīpaṅgaḷu, sapta kulaparvataṅgaḷu, samasta graharāśi tārāpathaṅgaḷaṁ garbhīkarisikoṇḍu brahmāṇḍavenisittu. Idu jagadutpatti kāṇā, mahāliṅgaguru śivasid'dhēśvara prabhuvē.