•  
  •  
  •  
  •  
Index   ವಚನ - 256    Search  
 
ವಾಚಾತೀತ, ಮನೋತೀತ ಅಗೋಚರ ನಿರ್ನಾಮ ನಿರ್ಗುಣ ನಿತ್ಯ ನಿರಂಜನ ನಿರವಯ ನಿರಾಮಯ ನಿರ್ಮಲ ನಿಃಕಲ ಜ್ಞಾನ ನಿರ್ಭೇದ್ಯ ನಿರುಪಾಧಿಕ ನಿರವಸ್ಥ ನಿರಾವರಣ ಅದ್ವೈತಾನಂದ ಸಂಪೂರ್ಣವನ್ನುಳ್ಳ ಪರಶಿವ, ತಾನೆ ಪರಮೇಶ್ವರನಾದನು. ಆ ಪರಮೇಶ್ವರನಿಂದ ಸದಾಶಿವನಾದನು. ಸದಾಶಿವನಿಂದ ಈಶ್ವರನಾದನು. ಈಶ್ವರನಿಂದ ಮಹೇಶ್ವರನಾದನು. ಮಹೇಶ್ವರನಿಂದ ರುದ್ರನಾದನು. ರುದ್ರನಿಂದ ವಿಷ್ಣು ಹುಟ್ಟಿದನು. ವಿಷ್ಣುವಿನಿಂದ ಬ್ರಹ್ಮ ಹುಟ್ಟಿದನು. ಬ್ರಹ್ಮನಿಂದ ಸಕಲ ಜಗತ್ತೆಲ್ಲಾ ಆಯಿತು. ಆಧಾರಚಕ್ರಕ್ಕೆ ಬ್ರಹ್ಮನಧಿದೇವತೆ; ಸ್ವಾಧಿಷ್ಠಾನಚಕ್ರಕ್ಕೆ ವಿಷ್ಣುವಧಿದೇವತೆ; ಮಣಿಪೂರಕಚಕ್ರಕ್ಕೆ ರುದ್ರನಧಿದೇವತೆ; ಅನಾಹತಚಕ್ರಕ್ಕೆ ಈಶ್ವರನಧೀದೇವತೆ; ವಿಶುದ್ಧಿಚಕ್ರಕ್ಕೆ ಸದಾಶಿವನಧಿದೇವತೆ; ಆಜ್ಞಾಚಕ್ರಕ್ಕೆ ಪರಮೇಶ್ವರನಧಿದೇವತೆ. ಆಧಾರಸ್ಥಾನದ ಬ್ರಹ್ಮತತ್ವಕ್ಕೆ ಆಚಾರಲಿಂಗವ ಸ್ವಾಯತವ ಮಾಡಿ ಸ್ವಾಧಿಷ್ಠಾನದ ವಿಷ್ಣುತತ್ವಕ್ಕೆ ಗುರುಲಿಂಗವ ಸ್ವಾಯತವ ಮಾಡಿ ಮಣಿಪೂರಕಸ್ಥಾನದ ರುದ್ರತತ್ವಕ್ಕೆ ಶಿವಲಿಂಗವ ಸ್ವಾಯತವ ಮಾಡಿ ಅನಾಹತಸ್ಥಾನದ ಈಶ್ವರತತ್ವಕ್ಕೆ ಜಂಗಮಲಿಂಗವ ಸ್ವಾಯತವ ಮಾಡಿ ವಿಶುದ್ಧಿಸ್ಥಾನದ ಸದಾಶಿವತತ್ವಕ್ಕೆ ಪ್ರಸಾದಲಿಂಗವ ಸ್ವಾಯತವ ಮಾಡಿ ಆಜ್ಞಾಸ್ಥಾನದ ಪರಮೇಶ್ವರನೆಂಬತತ್ವಕ್ಕೆ ಮಹಾಲಿಂಗವ ಸ್ವಾಯತವ ಮಾಡಿ ಪರಿಪೂರ್ಣಲಿಂಗವು ತಾನೆ ಸರ್ವಾಂಗದಲ್ಲಿ ಸ್ವಾಯತವಾಗಲು, ಆ ಶರಣನ ಸರ್ವಾಂಗವು ನಿರುಪಮ ಲಿಂಗಸ್ವಾಯತವಾಗಿ ನಿರವಯಸ್ಥಲ ವೇದ್ಯವಾಯಿತ್ತಯ್ಯ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
Transliteration Vācātīta, manōtīta agōcara nirnāma nirguṇa nitya niran̄jana niravaya nirāmaya nirmala niḥkala jñāna nirbhēdya nirupādhika niravastha nirāvaraṇa advaitānanda sampūrṇavannuḷḷa paraśiva, tāne paramēśvaranādanu. Ā paramēśvaraninda sadāśivanādanu. Sadāśivaninda īśvaranādanu. Īśvaraninda mahēśvaranādanu. Mahēśvaraninda rudranādanu. Rudraninda viṣṇu huṭṭidanu. Viṣṇuvininda brahma huṭṭidanu. Brahmaninda sakala jagattellā āyitu. Ādhāracakrakke brahmanadhidēvate; svādhiṣṭhānacakrakke viṣṇuvadhidēvate; maṇipūrakacakrakke rudranadhidēvate; anāhatacakrakke īśvaranadhīdēvate; viśud'dhicakrakke sadāśivanadhidēvate; ājñācakrakke paramēśvaranadhidēvate. Ādhārasthānada brahmatatvakke ācāraliṅgava svāyatava māḍi svādhiṣṭhānada viṣṇutatvakke guruliṅgava svāyatava māḍi maṇipūrakasthānada rudratatvakke śivaliṅgava svāyatava māḍi Anāhatasthānada īśvaratatvakke jaṅgamaliṅgava svāyatava māḍi viśud'dhisthānada sadāśivatatvakke prasādaliṅgava svāyatava māḍi ājñāsthānada paramēśvaranembatatvakke mahāliṅgava svāyatava māḍi paripūrṇaliṅgavu tāne sarvāṅgadalli svāyatavāgalu, ā śaraṇana sarvāṅgavu nirupama liṅgasvāyatavāgi niravayasthala vēdyavāyittayya, mahāliṅgaguru śivasid'dhēśvara prabhuvē.