ತನುವಿನೊಳಗೆ ತನುವಾಗಿಪ್ಪಿರಯ್ಯ.
ಮನದೊಳಗೆ ಮನವಾಗಿಪ್ಪಿರಯ್ಯ.
ಭಾವದೊಳಗೆ ಭಾವವಾಗಿಪ್ಪಿರಯ್ಯ.
ಎನ್ನಂಗ ಪ್ರಾಣ ಮಹಾಲಿಂಗ ನೀವೆಯಾದ ಕಾರಣ
ಎನ್ನಗಿನ್ನಾವ ಭಂಗವೂ ಇಲ್ಲ ನೋಡಾ.
ಅದೇನು ಕಾರಣವೆಂದಡೆ:
ಎನ್ನಂಗವು ನಿಮ್ಮೊಳಗಡಗಿ ಶುದ್ಧ ಪರಮಾತ್ಮನಾದೆನು ಕಾಣಾ.
ಇನ್ನಾವ ಪ್ರಪಂಚೂ ಎನಗಿಲ್ಲ ನೀನು ನಿರ್ಲೇಪಕನಾದ ಕಾರಣ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
Transliteration Tanuvinoḷage tanuvāgippirayya.
Manadoḷage manavāgippirayya.
Bhāvadoḷage bhāvavāgippirayya.
Ennaṅga prāṇa mahāliṅga nīveyāda kāraṇa
ennaginnāva bhaṅgavū illa nōḍā.
Adēnu kāraṇavendaḍe:
Ennaṅgavu nim'moḷagaḍagi śud'dha paramātmanādenu kāṇā.
Innāva prapan̄cū enagilla nīnu nirlēpakanāda kāraṇa,
mahāliṅgaguru śivasid'dhēśvara prabhuvē.