•  
  •  
  •  
  •  
Index   ವಚನ - 536    Search  
 
ಆ ಭಕ್ತಂಗೆ ಲಿಂಗವೇ ಪ್ರಾಣ; ಆ ಲಿಂಗಕ್ಕೆ ಗುರುವೇ ಪ್ರಾಣ; ಆ ಗುರುವಿಗೆ ಜಂಗಮವೇ ಪ್ರಾಣ ನೋಡಾ. ಅದೇನುಕಾರಣವೆಂದರೆ: ಆ ನಿತ್ಯ ನಿರಂಜನ ಪರವಸ್ತುವೆ ಘನ ಚೈತನ್ಯವೆಂಬ ಜಂಗಮವು ನೋಡಾ. ಆ ಪರಮ ಜಂಗಮದಿಂದ ನಿಃಕಲ ಗುರುಮೂರ್ತಿ ಉದಯವಾದನು ನೋಡಾ. ಆ ನಿಃಕಲ ಗುರುಮೂರ್ತಿಯಿಂದ ಆದಿಮಹಾಲಿಂಗವು ಉದಯವಾಯಿತ್ತು ನೋಡಾ. ಆ ಆದಿಮಹಾಲಿಂಗದಿಂದ ಮೂರ್ತಿಗೊಂಡನು ಭಕ್ತನು. ಆ ಗುರುವಿಂಗೆ ಆ ಲಿಂಗಕ್ಕೆ ಆ ಭಕ್ತಂಗೆ ಆ ಜಂಗಮ ಪ್ರಸಾದವೇ ಪ್ರಾಣ ನೋಡಾ. ಇದು ಕಾರಣ: ಭಕ್ತನಾದರೂ ಲಿಂಗವಾದರೂ ಗುರುವಾದರೂ ಜಂಗಮ ಪ್ರಸಾದವ ಕೊಳ್ಳಲೇಬೇಕು. ಜಂಗಮ ಪ್ರಸಾದವ ಕೊಳ್ಳದಿದ್ದರೆ ಆತ ಗುರುವಲ್ಲ, ಅದು ಲಿಂಗವಲ್ಲ; ಆತ ಭಕ್ತನಲ್ಲ ನೋಡಾಠ. ಆ ಶೈವ ಪಾಷಂಡಿಯ ಕೈಯ ಪಡೆದುದು ಉಪದೇಶವಲ್ಲ; ಆತನಿಂದ ಪಡೆದುದು ಲಿಂಗವಲ್ಲ. ಆ ಲಿಂಗವ ಧರಿಸಿಪ್ಪಾತ ಭಕ್ತನಲ್ಲ. ಅವ ಭೂತಪ್ರಾಣಿ ನೋಡಾ. ಇದುಕಾರಣ: ಜಂಗಮ ಪ್ರಸಾದವ ಲಿಂಗಕ್ಕೆ ಕೊಟ್ಟು ಕೊಂಬಾತನೆ ಶಿವಭಕ್ತನು. ಆ ಜಂಗಮ ಪ್ರಸಾದವ ಲಿಂಗಕ್ಕೆ ಕೊಟ್ಟು ಕೊಳ್ಳದಿದ್ದರೆ ಅವ ಭವಿಗಿಂದಲು ಕರಕಷ್ಟ ನೋಡಾ. ಆ ಭವಭಾರಿಯ ಮುಖ ನೋಡಲಾಗದು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
Transliteration Ā bhaktaṅge liṅgavē prāṇa; ā liṅgakke guruvē prāṇa; ā guruvige jaṅgamavē prāṇa nōḍā. Adēnukāraṇavendare: Ā nitya niran̄jana paravastuve ghana caitan'yavemba jaṅgamavu nōḍā. Ā parama jaṅgamadinda niḥkala gurumūrti udayavādanu nōḍā. Ā niḥkala gurumūrtiyinda ādimahāliṅgavu udayavāyittu nōḍā. Ā ādimahāliṅgadinda mūrtigoṇḍanu bhaktanu. Ā guruviṅge ā liṅgakke ā bhaktaṅge ā jaṅgama prasādavē prāṇa nōḍā. Idu kāraṇa: Bhaktanādarū liṅgavādarū guruvādarū jaṅgama prasādava koḷḷalēbēku. Jaṅgama prasādava koḷḷadiddare āta guruvalla, adu liṅgavalla; āta bhaktanalla nōḍāṭha. Ā śaiva pāṣaṇḍiya kaiya paḍedudu upadēśavalla; ātaninda paḍedudu liṅgavalla. Ā liṅgava dharisippāta bhaktanalla. Ava bhūtaprāṇi nōḍā. Idukāraṇa: Jaṅgama prasādava liṅgakke koṭṭu kombātane śivabhaktanu. Ā jaṅgama prasādava liṅgakke koṭṭu koḷḷadiddare ava bhavigindalu karakaṣṭa nōḍā. Ā bhavabhāriya mukha nōḍalāgadu kāṇā, mahāliṅgaguru śivasid'dhēśvara prabhuvē.