•  
  •  
  •  
  •  
Index   ವಚನ - 351    Search  
 
ಕಾಯವೆಂಬ ಪಟ್ಟಣಕ್ಕೆ ಅಕಾಯನಿತ್ಯನೆಂಬರಸು ಕ್ಷಮೆ ದಮೆ ತಿತಿಕ್ಷೆ ಶಾಂತಿ ಉಪರತಿ ಸುಮನ ನಿರಹಂಕಾರಗಳೆಂಬ ಪರಿವಾರ. ಆ ಪಟ್ಟಣದ ಹೊರ ಒಳಯಕ್ಕೆ ಒಂಬತ್ತು ಬಾಗಿಲು. ಮಧ್ಯ ಒಳಯಕ್ಕೆ ನಾಲ್ಕು ಬಾಗಿಲು. ಆ ಅರಸಿನರಮನೆಯ ಸ್ವಯಂಭುನಾಥನ ಗರ್ಭಗೃಹಕ್ಕೆ ಎರಡು ಬಾಗಿಲು. ಮೇಲುಶಿಖರದಲೊಂದು ಬಾಗಿಲು ಉರಿಯನುಗುಳುವದು. ಆ ಪಟ್ಟಣದ ಅರಸು ಸ್ವಯಂಭುನಾಥನಿಗೆ ನಿತ್ಯ ನೇಮವ ಮಾಡಲೆಂದು ಗರ್ಭಗೃಹವ ಹೊಗಲೊಡನೆ ಆತನ ಕೈವಿಡಿದು ಉಭಯ ಬಾಗಿಲ ಹೊಕ್ಕು ಹೋಗಿ ಉಭಯ ನಿರ್ವಯಲಾದ ನಿಲವನುಪಮಿಸಬಹುದೇ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಲ್ಲಿ ಒಂದಾದ ಲಿಂಗೈಕ್ಯವನು?
Transliteration Kāyavemba paṭṭaṇakke akāyanityanembarasu kṣame dame titikṣe śānti uparati sumana nirahaṅkāragaḷemba parivāra. Ā paṭṭaṇada hora oḷayakke ombattu bāgilu. Madhya oḷayakke nālku bāgilu. Ā arasinaramaneya svayambhunāthana garbhagr̥hakke eraḍu bāgilu. Mēluśikharadalondu bāgilu uriyanuguḷuvadu. Ā paṭṭaṇada arasu svayambhunāthanige nitya nēmava māḍalendu garbhagr̥hava hogaloḍane ātana kaiviḍidu ubhaya bāgila hokku hōgi ubhaya nirvayalāda nilavanupamisabahudē, nijaguru svatantrasid'dhaliṅgēśvaranalli ondāda liṅgaikyavanu?