ಶೃಂಗಾರದ ಊರಿಗೆ ಒಂಬತ್ತು ಬಾಗಿಲು,
ಐದು ದಿಡ್ಡಿ , ಎರಡು ತೋರಗಂಡಿ,
ಐವರು ತಳವಾರರು, ಮೂವರು ಪ್ರಧಾನರು,
ಇಬ್ಬರು ಸೇನಬೋವರು, ಒಬ್ಬ ಅರಸು.
ಅರಸಿಂಗೆ ಐವರು ಸೊಳೆಯರು,
ಅವರ ಬಾಗಿಲ ಕಾವರು ಹತ್ತು ಮಂದಿ.
ಅವರ ಪಾ[ಲಿ]ಪ ಡಕ್ಕಣದವರು ಇಪ್ಪತ್ತೈದು ಮಂದಿ.
ಅವರ ಭಂಡಾರ ಬೊಕ್ಕಸ ಅಟ್ಟುಮಣಿಹ,
ಹರಿಮಣಿಹ, ಕಟ್ಟಿಗೆಯವರು, ಬೋಹೋ
ಎಂದು ಕೊಂಡಾಡುವರು,
ಮೂವತ್ತಾರುಮಂದಿ ಚೂಣಿಯರು.
ಹುಯ್ಯಲ ಕಾಲಾಳುಗಳು ನೂರನಾಲ್ವತ್ತೆಂಟು.
ಈ ಸಂಭ್ರಮದಲ್ಲಿ ಆ ಮನವೆಂಬ ಅರಸು
ಸುಖಸಂತೋಷದಲ್ಲಿ ರಾಜ್ಯಂಗೆಯ್ಯುತ್ತಿರಲು,
ಇತ್ತ ಶರಣ ತನ್ನ ತಾನೆ ಎಚ್ಚೆತ್ತು ನೋಡಿ,
ಪಶ್ಚಿಮ ಕದವ ಮುರಿದು ಒಳಹೊಕ್ಕು,
ಒಳಗೆ ತೊಳಗಿ ಬೆಳಗುವ ಜ್ಯೋತಿರ್ಮಯ ಲಿಂಗವನೆ ಕಂಡು,
ಆ ಲಿಂಗದಂಘ್ರಿವಿಡಿದು ಸಂಗಸುಖದೊಳಗೆ
ಒಂಬತ್ತು ಬಾಗಿಲಿಗೂ ಲಿಂಗವನೆ ಸ್ಥಾಪ್ಯವ ಮಾಡಲಾಗಿ,
ಮನವೆಂಬ ಅರಸು ಒಳಗೆ ಸಿಕ್ಕಿದ ಅಗಳ ಮುರಿದು ಬರುತ್ತಿರಲು,
ದಾರಿಯ ಕಾಣದೆ ಕಣ್ಣುಗೆಟ್ಟು ಹೋದರು.
ಮನವೆಂಬ ಅರಸು ತನ್ನ ಸೊಳೆಯರೈವರು,
ಪ್ರಧಾನರು, ಸೇನಬೋವರು, ಪಾಲಿಪ ಡಕ್ಕಣದವರು,
ಬೋಹೋ ಎಂದು ಉಗ್ಘಡಿಸುವವರು,
ಆನೆ ಕುದುರೆ ಇವರೆಲ್ಲರನು ಹಿಡಿದು ಕಟ್ಟಿಕೊಂಡು
ಮಹಾಲಿಂಗವೆಂಬ ಅರಸಿಂಗೆ ತಂದೊಪ್ಪಿಸಿದನು.
ಆ ಲಿಂಗವ ಕಂಡವರೆಲ್ಲ ಲಿಂಗದಂತೆ ಆದರು.
ಇದು ಕಾರಣ, ಶರಣಂಗೆ
ಅಂಗಭೋಗವೆಲ್ಲ ಲಿಂಗಭೋಗವಾಯಿತ್ತು .
ಲಿಂಗಭೋಗವೆ ಅರ್ಪಿತವಾಯಿತ್ತು ,
ಅರ್ಪಿತವೆ ಪ್ರಸಾದವಾಯಿತ್ತು ,
ಪ್ರಸಾದದೊಳಗೆ ಪರಿಣಾಮಿಯಾದ.
ಇದು ಕಾರಣ, ಎನ್ನ ಅಂಗ ಉರಿವುಂಡ
ಕರ್ಪುರದಂತಾಯಿತ್ತಯ್ಯಾ,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ .
Transliteration Śr̥ṅgārada ūrige ombattu bāgilu,
aidu diḍḍi, eraḍu tōragaṇḍi,
aivaru taḷavāraru, mūvaru pradhānaru,
ibbaru sēnabōvaru, obba arasu.
Arasiṅge aivaru soḷeyaru,
avara bāgila kāvaru hattu mandi.
Avara pā[li]pa ḍakkaṇadavaru ippattaidu mandi.
Avara bhaṇḍāra bokkasa aṭṭumaṇiha,
harimaṇiha, kaṭṭigeyavaru, bōhō
endu koṇḍāḍuvaru,
mūvattārumandi cūṇiyaru.
Huyyala kālāḷugaḷu nūranālvatteṇṭu.
Ī sambhramadalli ā manavemba arasu
sukhasantōṣadalli rājyaṅgeyyuttiralu,
Itta śaraṇa tanna tāne eccettu nōḍi,
paścima kadava muridu oḷahokku,
oḷage toḷagi beḷaguva jyōtirmaya liṅgavane kaṇḍu,
ā liṅgadaṅghriviḍidu saṅgasukhadoḷage
ombattu bāgiligū liṅgavane sthāpyava māḍalāgi,
manavemba arasu oḷage sikkida agaḷa muridu baruttiralu,
dāriya kāṇade kaṇṇugeṭṭu hōdaru.
Manavemba arasu tanna soḷeyaraivaru,
pradhānaru, sēnabōvaru, pālipa ḍakkaṇadavaru,
bōhō endu ugghaḍisuvavaru,
āne kudure ivarellaranu hiḍidu kaṭṭikoṇḍu
Mahāliṅgavemba arasiṅge tandoppisidanu.
Ā liṅgava kaṇḍavarella liṅgadante ādaru.
Idu kāraṇa, śaraṇaṅge
aṅgabhōgavella liṅgabhōgavāyittu.
Liṅgabhōgave arpitavāyittu,
arpitave prasādavāyittu,
prasādadoḷage pariṇāmiyāda.
Idu kāraṇa, enna aṅga urivuṇḍa
karpuradantāyittayyā,
basavapriya kūḍalacennabasavaṇṇā.