ಎನ್ನ ಘ್ರಾಣದ ಬಾಗಿಲಲ್ಲಿರ್ದು, ಸುವಾಸನೆಯ ಸುಖಂಗಳ
ಭೋಗಿಸುವಾತ ನೀನಯ್ಯಾ.
ಎನ್ನ ಜಿಹ್ವೆಯ ಬಾಗಿಲಲ್ಲಿರ್ದು,
ಸುರುಚಿಯ ಸುಖಂಗಳ ಭೋಗಿಸುವಾತ ನೀನಯ್ಯಾ.
ಎನ್ನ ನೇತ್ರದ ಬಾಗಿಲಲ್ಲಿರ್ದು,
ಸುರೂಪ ಸುಖಂಗಳ ಭೋಗಿಸುವಾತ ನೀನಯ್ಯಾ.
ಎನ್ನ ತ್ವಕ್ಕಿನ ಬಾಗಿಲಲ್ಲಿರ್ದು,
ಸುಸ್ಪರ್ಶವ ಮಾಡಿ ಆ ಸ್ಪರ್ಶನ ಸುಖವ
ಸುಖಿಸುವಾತ ನೀನಯ್ಯಾ.
ಎನ್ನ ಶ್ರೋತ್ರದ ಬಾಗಿಲಲ್ಲಿರ್ದು
ಸುಶಬ್ದಸುಖಂಗಳ ಭೋಗಿಸುವಾತ ನೀನಯ್ಯಾ.
ಎನ್ನ ಮನದ ಬಾಗಿಲಲ್ಲಿರ್ದು
ಪಂಚೇಂದ್ರಿಯಂಗಳನುರಿದು
ಸುಖಿಸುವ ಅರಿವಿನಮೂರ್ತಿ ನೀನಯ್ಯಾ
ಅದೇನು ಕಾರಣವೆಂದಡೆ:
ನೀನಾಡಿಸುವ ಜಂತ್ರದ
ಬೊಂಬೆ ನಾನೆಂದರಿದ ಕಾರಣ.
ನಿಮ್ಮ ಕರಣಂಗಳೆ ಎನ್ನ ಹರಣಂಗಳಾಗಿ,
ಎನ್ನ ಹರಣಂಗಳೆ ನಿಮ್ಮ ಕಿರಣಂಗಳಾಗಿ
ಕೂಡಲಚೆನ್ನಸಂಗಮದೇವಾ
ನೀನಾಡಿಸಿದಂತೆ ನಾನಾಡಿದೆನಯ್ಯಾ.
Transliteration Enna ghrāṇada bāgilallirdu, suvāsaneya sukhaṅgaḷa
bhōgisuvāta nīnayyā.
Enna jihveya bāgilallirdu,
suruciya sukhaṅgaḷa bhōgisuvāta nīnayyā.
Enna nētrada bāgilallirdu,
surūpa sukhaṅgaḷa bhōgisuvāta nīnayyā.
Enna tvakkina bāgilallirdu,
susparśava māḍi ā sparśana sukhava
sukhisuvāta nīnayyā.
Enna śrōtrada bāgilallirdu
suśabdasukhaṅgaḷa bhōgisuvāta nīnayyā.
Enna manada bāgilallirdu
Pan̄cēndriyaṅgaḷanuridu
sukhisuva arivinamūrti nīnayyā
adēnu kāraṇavendaḍe:
Nīnāḍisuva jantrada
bombe nānendarida kāraṇa.
Nim'ma karaṇaṅgaḷe enna haraṇaṅgaḷāgi,
enna haraṇaṅgaḷe nim'ma kiraṇaṅgaḷāgi
kūḍalacennasaṅgamadēvā
nīnāḍisidante nānāḍidenayyā.