ಒಡಲೆಂಬಾರಣ್ಯದ ಪಡುವಣ
ಕಾಳುಗಟ್ಟದ ಗಹ್ವರದ ನವದ್ವಾರದೊಳಗೆ
ಅಡಗಿಪ್ಪ ಐವರ ಕಳ್ಳರ ತಿಳಿದು ನೋಡಿರಯ್ಯಾ.
ಆ ಕಳ್ಳರು ಇಹನ್ನಕ್ಕರ ಊರಿಗುಪಟಳ ಮನೆಗೆ ಮಾರಿ,
ಚೌಕ ಗ್ರಾಮದ ಮಧ್ಯದವರಿಗುಳುಹಿಲ್ಲ.
ತನುಪ್ರಪಂಚಿಗಳು ಮನಪ್ರಪಂಚಿಗಳು ಧನಪ್ರಪಂಚಿಗಳು
ವಾದಿಗಳು ತರ್ಕಿಗಳು ನಾನಾ ಕುಟಿಲ
ಕುಹಕ ಬಹುಪಾಪಿಗಳೆಲ್ಲ ನೆರೆದು,
ಆ ಕಳ್ಳರ ಹಿಡಿದಿಹೆವೆನುತ್ತಿಹರಯ್ಯಾ.
ಅದಕ್ಕೆಂಟು ಬೀದಿ ಒಂಬತ್ತು
ಓಡುಗಂಡಿ ಕಾಣಬಾರದ ಕತ್ತಲೆ,
ಹೆಜ್ಜೆಯ ಹೊಲಬ ಕಂಡೆಹೆನೆಂಬನು ಭ್ರಾಂತ ನೋಡಾ!
"ಓಂ|| ಬ್ರಹ್ಮಸ್ನಾನಂ ಪವನಜ್ಞಾನಂ ಲಿಂಗಧ್ಯಾನಂ|
ಸುಜ್ಞಾನದರ್ಶನಂ ಪ್ರಭಾಕರಂ ದಿವಾಕರಮ್"||
ಇಂತೀ ಶ್ರುತಿಮತದಲ್ಲಿ ತಿಳಿದು
ನೋಡಲಿಕೆಯಾಗಿ ಆ ಹೆಜ್ಜೆ ಹೋಯಿತು!
ಅಂಗಸಂಗನ ಹಳ್ಳಿಯ
ಒಳಗೆರೆಯ ಒಸರುಬಾವಿಯ
ಲಿಂಗಗೂಡಿನ ಶಿವಪುರದ ಸೀಮೆಯ,
ನಿಟಿಲಪುರದ ತಲೆವಲದಲ್ಲಿ ಸಿಕ್ಕಿದ
ಕಳ್ಳರ ಅಂಗದ ಮೇಲೆ ಕಟ್ಟಿತಂದು
ಎನ್ನೊಡೆಯ ಪ್ರಭುರಾಯಂಗೊಪ್ಪಿಸಲು,
ಆ ಪ್ರಭುರಾಯ ತನ್ನವರೆಂದು
ಒಕ್ಕುದ ಮಿಕ್ಕುದನಿಕ್ಕಿ ರಕ್ಷಿಸುವ ಕಾಣಿರೆ!
ಇಂತಪ್ಪ ಘಟ ಪಂಚಭೂತಂಗಳ ಕಟ್ಟಿ ನಿಲಿಸಿ,
ಆತ್ಮಜ್ಞಾನ ಭಕ್ತಿರಸಾಮೃತಸಾರಾಯವನುಣಬಲ್ಲವರಾರೆಂದಡೆ
ಪ್ರಭುವಿನ ಬಳಿಯ ಬಸವಸಂತತಿಗಲ್ಲದೆ ಅಳವಡದು.
ಮಿಕ್ಕಿನ ಪ್ರಪಂಚಿಗಳಿಗೆ ಅಸಾಧ್ಯ ಕಾಣಾ
ಕೂಡಲಚೆನ್ನಸಂಗಮದೇವಯ್ಯಾ.
Transliteration Oḍalembāraṇyada paḍuvaṇa
kāḷugaṭṭada gahvarada navadvāradoḷage
aḍagippa aivara kaḷḷara tiḷidu nōḍirayyā.
Ā kaḷḷaru ihannakkara ūrigupaṭaḷa manege māri,
cauka grāmada madhyadavariguḷuhilla.
Tanuprapan̄cigaḷu manaprapan̄cigaḷu dhanaprapan̄cigaḷu
vādigaḷu tarkigaḷu nānā kuṭila
kuhaka bahupāpigaḷella neredu,
ā kaḷḷara hiḍidihevenuttiharayyā.
Adakkeṇṭu bīdi ombattu
ōḍugaṇḍi kāṇabārada kattale,
hejjeya holaba kaṇḍ'̔ehenembanu bhrānta nōḍā!
Ōṁ|| brahmasnānaṁ pavanajñānaṁ liṅgadhyānaṁ|
sujñānadarśanaṁ prabhākaraṁ divākaram||
intī śrutimatadalli tiḷidu
nōḍalikeyāgi ā hejje hōyitu!
Aṅgasaṅgana haḷḷiya
oḷagereya osarubāviya
liṅgagūḍina śivapurada sīmeya,
niṭilapurada talevaladalli sikkida
kaḷḷara aṅgada mēle kaṭṭitandu
ennoḍeya prabhurāyaṅgoppisalu,
ā prabhurāya tannavarendu
okkuda mikkudanikki rakṣisuva kāṇire!
Intappa ghaṭa pan̄cabhūtaṅgaḷa kaṭṭi nilisi,
ātmajñāna bhaktirasāmr̥tasārāyavanuṇaballavarārendaḍe
prabhuvina baḷiya basavasantatigallade aḷavaḍadu.
Mikkina prapan̄cigaḷige asādhya kāṇā
kūḍalacennasaṅgamadēvayyā.