ಶ್ರೀಗುರುಲಿಂಗಜಂಗಮಕರುಣಕಟಾಕ್ಷೆಯಿಂದ
ತ್ರಿವಿಧದೀಕ್ಷೆ ತ್ರಿವಿಧಾಚಾರ ತ್ರಿವಿಧಲಿಂಗಾರ್ಚನೆ
ತ್ರಿವಿಧಲಿಂಗಾರ್ಪಣ, ತ್ರಿವಿಧಲಿಂಗಾನುಭಾವ,
ತ್ರಿವಿಧಭಕ್ತಿ ಜ್ಞಾನವೈರಾಗ್ಯ ಸತ್ಯಸನ್ಮಾರ್ಗಾಚಾರಾನ್ವಿತ
ಸದ್ಭಕ್ತ-ಮಾಹೇಶ್ವರ-ಶರಣಗಣಂಗಳು, ಮೊಟ್ಟಮೊದಲಲ್ಲಿ,
ಮಡು ಹೊಂಡ ನದಿ ಹಳ್ಳ ಕೆರೆ ಬಾವಿ ಕೊಳ ಗುಂಡ ಚಿಲುಮೆ
ಮೊದಲಾದ ಸ್ಥಾನಂಗಳಲ್ಲಿ ಸ್ವಚ್ಛನಿರ್ಮಲತರವಾದ
ಪರಿಣಾಮೋದಕವನ್ನು
ಭಾಜನಮುಖಂಗಳಿಗೆ ಕ್ರಿಯಾ-ಜ್ಞಾನಯುಕ್ತವಾದ
ಉಭಯಮಡಿಕೆಯ ಪಾವಡವ ಹಾಕಿ ಶೋಧಿಸಿ
ಮೇಲುಪಾವಡವ ಬಾಸಣಿಸಿ,
ಭವಿಜನಾತ್ಮರ ಸೋಂಕದೆ ತೆಗೆದುಕೊಂಡು ಬಂದು,
ಶ್ರೀಗುರುಲಿಂಗಜಂಗಮದ ಪಾದ ಪ್ರಕ್ಷಾಲನವಂ ಮಾಡಿ
ಆ ಮೇಲೆ ಉಭಯ ಪಾದದ ಅಡಿಯಲ್ಲಿ ಮೂರುವೇಳೆ,
ದಶಾಂಗುಲಿ ಒಂದು ವೇಳೆ,
ಸ್ಪರ್ಶನವಾದಂಥ ಗುರುಪಾದೋದಕವ ಸಮಸ್ತ
ಭಾಂಡ ಭಾಜನಂಗಳಲ್ಲಿ ತುಂಬಿ
ಕ್ರಿಯಾಶಕ್ತಿಯರು ಕ್ರಿಯಾಭೃತ್ಯರಾದರು ಸರಿಯೆ
ಲಿಂಗಾಭಿಷೇಕ ಲಿಂಗಾರ್ಚನಕ್ರಿಯಗಳ ತೀರ್ಚಿಸಿಕೊಂಡು,
ಮಂತ್ರಧ್ಯಾನಾರೂಢರಾಗಿ, ಲಿಂಗಬಾಹ್ಯರ
ಸ್ಪರ್ಶನಸಂಭಾಷಣೆಗಳನುಳಿದು
ಸಕಲಪದಾರ್ಥಂಗಳ ಕ್ರಿಮಿಕೀಡೆಕೀಟಕಂಗಳ
ಕಾಷ್ಠಮೃಣ್ ಪಾಷಾಣಂಗಳ ಶೋಧಿಸಿ,
ಅತಿ ಸುಯಿದಾನದಿಂದ ಪಾದೋದಕದಲ್ಲಿ ಪಾಕವ ಮಾಡಿ,
ಆ ಪಾಕದ ಭಾಜನಂಗಳಿಗೆ, ಹಸ್ತಸ್ಪರ್ಶನ ಮಂತ್ರನ್ಯಾಸ
ಲಿಂಗದೃಷ್ಟಿ ವಾಕ್ಶೀಲ ಮಂತ್ರಸ್ಮರಣೆ ಚಿದ್ಭಸ್ಮದಿಂದ,
ಆ ಪದಾರ್ಥದ ಪೂರ್ವಾಶ್ರಯವ ಕಳೆದು
ಶ್ರೀಗುರುಲಿಂಗಜಂಗಮದ ಶುದ್ಧಪ್ರಸಾದವೆಂದು ಭಾವಿಸಿ
ಸಾವಧಾನಭಕ್ತಿಯಿಂದ ಮಹಾನೈಷ್ಠೆ ಕರಿಗೊಂಡು
ಮಂತ್ರಸ್ಮರಣೆಯಿಂದ ಸತ್ಯಸದಾಚಾರ ಸತ್ಕ್ರಿಯಾಸಮ್ಯಜ್ಞಾನವುಳ್ಳ
ಗುರುಲಿಂಗಜಂಗಮಕ್ಕೆ ಸಮರ್ಪಣೆಯಂ ಮಾಡಿ,
ಅವರ ಕರುಣಪ್ರಸಾದವ ಸಮಸ್ತಶಕ್ತಿ
ಭಕ್ತಶರಣಂಗಳೆಲ್ಲ ಪರಿಣಾಮಿಸಿ,
ಭಾಂಡಭಾಜನಂಗಳಲ್ಲಿ ಉಳಿದ ಶೇಷಪಾದೋದಕವ
ಇಷ್ಟಲಿಂಗಬಾಹ್ಯವಾದ ಭವಿಜನಾತ್ಮರುಗಳಿಗೆ ಹಾಕಲಾಗದು.
ಅದಕ್ಕೆ ಹರವಾಕ್ಯವುಂಟು. ಹರಗುರುವಾಕ್ಯವ ಮೀರಿ
ವೇದಶ್ರುತಿವಾಕ್ಯವ ಹಿಡಿದು ಗುರುಮಾರ್ಗಾಚಾರಬಾಹ್ಯರಿಗೆ
ಲಿಂಗಪದಾರ್ಥವ ಕೊಟ್ಟಾತಂಗೆ ಯಮದಂಡಣೆ ಉಂಟು.
ಅಂತ್ಯದಲ್ಲಿ ಕಾಲಕಾಮರಿಗೊಳಗು ನೋಡ
ಕೂಡಲಚೆನ್ನಸಂಗಮದೇವ.
Transliteration Śrīguruliṅgajaṅgamakaruṇakaṭākṣeyinda
trividhadīkṣe trividhācāra trividhaliṅgārcane
trividhaliṅgārpaṇa, trividhaliṅgānubhāva,
trividhabhakti jñānavairāgya satyasanmārgācārānvita
sadbhakta-māhēśvara-śaraṇagaṇaṅgaḷu, moṭṭamodalalli,
maḍu hoṇḍa nadi haḷḷa kere bāvi koḷa guṇḍa cilume
modalāda sthānaṅgaḷalli svacchanirmalataravāda
pariṇāmōdakavannu
bhājanamukhaṅgaḷige kriyā-jñānayuktavāda
ubhayamaḍikeya pāvaḍava hāki śōdhisi
mēlupāvaḍava bāsaṇisi,
bhavijanātmara sōṅkade tegedukoṇḍu bandu,
Śrīguruliṅgajaṅgamada pāda prakṣālanavaṁ māḍi
ā mēle ubhaya pādada aḍiyalli mūruvēḷe,
daśāṅguli ondu vēḷe,
sparśanavādantha gurupādōdakava samasta
bhāṇḍa bhājanaṅgaḷalli tumbi
kriyāśaktiyaru kriyābhr̥tyarādaru sariye
liṅgābhiṣēka liṅgārcanakriyagaḷa tīrcisikoṇḍu,
mantradhyānārūḍharāgi, liṅgabāhyara
sparśanasambhāṣaṇegaḷanuḷidu
sakalapadārthaṅgaḷa krimikīḍekīṭakaṅgaḷa
kāṣṭhamr̥ṇ pāṣāṇaṅgaḷa śōdhisi,
ati suyidānadinda pādōdakadalli pākava māḍi,
ā pākada bhājanaṅgaḷige, hastasparśana mantran'yāsa
Liṅgadr̥ṣṭi vākśīla mantrasmaraṇe cidbhasmadinda,
ā padārthada pūrvāśrayava kaḷedu
śrīguruliṅgajaṅgamada śud'dhaprasādavendu bhāvisi
sāvadhānabhaktiyinda mahānaiṣṭhe karigoṇḍu
mantrasmaraṇeyinda satyasadācāra satkriyāsamyajñānavuḷḷa
guruliṅgajaṅgamakke samarpaṇeyaṁ māḍi,
avara karuṇaprasādava samastaśakti
bhaktaśaraṇaṅgaḷella pariṇāmisi,
bhāṇḍabhājanaṅgaḷalli uḷida śēṣapādōdakava
iṣṭaliṅgabāhyavāda bhavijanātmarugaḷige hākalāgadu.
Adakke haravākyavuṇṭu. Haraguruvākyava mīri
Vēdaśrutivākyava hiḍidu gurumārgācārabāhyarige
liṅgapadārthava koṭṭātaṅge yamadaṇḍaṇe uṇṭu.
Antyadalli kālakāmarigoḷagu nōḍa
kūḍalacennasaṅgamadēva.