ಅಕ್ಕಿ, ಬೇಳೆ, ಬೆಲ್ಲ, ಉಪ್ಪು, ಮೆಣಸು,
ಅಡಕೆ, ಫಲ, ರಸ, ದ್ರವ್ಯ ಮುಂತಾದದ್ರವ್ಯಕ್ಕೆ ವ್ರತವೊ?
ಮುಟ್ಟುವ ತಟ್ಟುವ ಸೋಂಕುವ ಚಿತ್ತಕ್ಕೆ ವ್ರತವೊ?
ಇವು ಬಾಹ್ಯದಲ್ಲಿ ಮಾಡುವ ಸೌಕರಿಯವಲ್ಲದೆ ವ್ರತಕ್ಕೆ ಸಲ್ಲ;
ವ್ರತವಾವುದೆಂದಡೆ:
ತನ್ನಯ ಸ್ವಪ್ನದಲ್ಲಿ ತನಗಲ್ಲದುದ ಕಂಡಡೆ,
ತಾ ಮುಟ್ಟದುದ ಮುಟ್ಟಿದಡೆ, ತಾ ಕೊಳ್ಳದುದ ಕೊಂಡಡೆ,
ಆ ಸೂಕ್ಷ್ಮ ತನುವಿನಲ್ಲಿ ಆ ತನುವಂ ಬಿಟ್ಟು ನಿಂದುದು ವ್ರತ.
ಸ್ಥೂಲತನುವಿನಲ್ಲಿ ಸರ್ವರ ನಿಂದೆಗೊಡಲಾಗದೆ,
ಮಾಡಿಕೊಂಡ ನೇಮಕ್ಕೆ ಕೇಡುಬಂದಲ್ಲಿ
ಆ ಅಂಗಕ್ಕೆ ಓಸರಿಸದೆ ನಿಂದುದು ಆಚಾರ.
ಇಂತೀ ಅಂತರಂಗದಲ್ಲಿ ವ್ರತ, ಬಹಿರಂಗದಲ್ಲಿ ಆಚಾರ,
ಇಂತೀ ಉಭಯ ಸಿದ್ಧವಾಗಿ ನಡೆವುದೆ ವ್ರತ ಆಚಾರ;
ಇಂತಿವನರಿದು ಮರೆದಲ್ಲಿ,
ತಾ ಮಾಡಿಕೊಂಡ ಕುತ್ತಕ್ಕೆ ಹಾಡಿ ಮದ್ದನರೆದಂತೆ,
ಜಗಕ್ಕೆ ಭಕ್ತನಾಗಿ ಆತ್ಮಂಗೆ ಅನುಸರಣೆಯಾದಲ್ಲಿ
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ಸಲ್ಲದ ನೇಮ.
Transliteration Akki, bēḷe, bella, uppu, meṇasu,
aḍake, phala, rasa, dravya muntādadravyakke vratavo?
Muṭṭuva taṭṭuva sōṅkuva cittakke vratavo?
Ivu bāhyadalli māḍuva saukariyavallade vratakke salla;
vratavāvudendaḍe:
Tannaya svapnadalli tanagalladuda kaṇḍaḍe,
tā muṭṭaduda muṭṭidaḍe, tā koḷḷaduda koṇḍaḍe,
ā sūkṣma tanuvinalli ā tanuvaṁ biṭṭu nindudu vrata.
Sthūlatanuvinalli sarvara nindegoḍalāgade,
māḍikoṇḍa nēmakke kēḍubandalli
Ā aṅgakke ōsarisade nindudu ācāra.
Intī antaraṅgadalli vrata, bahiraṅgadalli ācāra,
intī ubhaya sid'dhavāgi naḍevude vrata ācāra;
intivanaridu maredalli,
tā māḍikoṇḍa kuttakke hāḍi maddanaredante,
jagakke bhaktanāgi ātmaṅge anusaraṇeyādalli
ācārave prāṇavāda rāmēśvaraliṅgakke sallada nēma.