ಮಾಡಿ ನೀಡುವ ಭಕ್ತನನರಸಿಕೊಂಡು ಹೋಗಿ
ಗಡ್ಡ ಮಂಡೆ ಬೋಳಿನ ಕುರುಹ ತೋರಿ,
ಬಲ್ಲವರಂತೆ ಅಧ್ಯಾತ್ಮವ ನುಡಿದು
ಉಪಾಧಿಯಿಂದ ಒಡಲ ಹೊರೆವಾತ ವಿರಕ್ತನೆ ಅಲ್ಲ.
ವಿರಕ್ತನ ಪರಿ ಎಂತೆಂದಡೆ:
ಆಚಾರಸಹಿತವಾಗಿ ಭಕ್ತಿ ಭಿಕ್ಷವ ತೆಗೆದುಕೊಂಡು
ಉಪಾಧಿರಹಿತವಾಗಿಪ್ಪ ವಿರಕ್ತನ ತೋರಿ ಬದುಕಿಸಯ್ಯಾ
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವೆ.
Transliteration Māḍi nīḍuva bhaktananarasikoṇḍu hōgi
gaḍḍa maṇḍe bōḷina kuruha tōri,
ballavarante adhyātmava nuḍidu
upādhiyinda oḍala horevāta viraktane alla.
Viraktana pari entendaḍe:
Ācārasahitavāgi bhakti bhikṣava tegedukoṇḍu
upādhirahitavāgippa viraktana tōri badukisayyā
ācārave prāṇavāda rāmēśvaraliṅgave.