•  
  •  
  •  
  •  
Index   ವಚನ - 67    Search  
 
ಅಯ್ಯಾ, ನಾ ಮರ್ತ್ಯದಲ್ಲಿ ಹುಟ್ಟಿ ಕಷ್ಟಸಂಸಾರಿ ಎನಿಸಿಕೊಂಡೆ. ಕತ್ತಲೆಯಲ್ಲಿ ಮುಳುಗಿ ಕರ್ಮಕ್ಕೆ ಗುರಿಯಾಗುತ್ತಿದ್ದಡೆ, ಹೆತ್ತ ತಾಯಿ ಎಂಬ ಗುರುಸ್ವಾಮಿ ಎನ್ನ ಕೊರಳಿಗೆ ಗಂಡನೆಂಬ ಲಿಂಗವ ಕಟ್ಟಿದನು. ತಂದೆಯೆಂಬ ಜಂಗಮಲಿಂಗವು ಎನ್ನ ಪ್ರಾಣಕ್ಕೆ ಪ್ರಸಾದವ ಊಡಿದನು. ಪ್ರಾಣಕ್ಕೆ ಪ್ರಸಾದವನೂಡಲಾಗಲೆ ಕತ್ತಲೆ ಹರಿಯಿತ್ತು ಕರ್ಮ ಹಿಂಗಿತ್ತು ಮನ ಬತ್ತಲೆಯಾಯಿತ್ತು ಚಿತ್ತ ಸುಯಿದಾನವಾಯಿತ್ತು; ನಿಶ್ಚಿಂತವಾಯಿತ್ತು. ನಿಜವ ನೆಮ್ಮಿ ನೋಡುವನ್ನಕ್ಕ, ಎನ್ನ ಅತ್ತೆ ಮಾವರು ಅರತುಹೋದರು ಅತ್ತಿಗೆ ನಾದಿನಿಯರು ಎತ್ತಲೋಡಿಹೋದರು, ಸುತ್ತಲಿರುವ ಬಂಧುಗಳೆಲ್ಲ ಬಯಲಾದರು. ಎನ್ನ ತಂದೆ-ತಾಯಿ ಕಟ್ಟಿದ ಚಿಕ್ಕಂದಿನ ಗಂಡನ ನೋಡುವ ನೋಟ ಹೋಗಿ, ಎನ್ನ ಮನಕ್ಕೆ ಸಿಕ್ಕಿತ್ತು ಅಂಗಲಿಂಗವೆಂಬ ಉಭಯವಳಿಯಿತ್ತು, ಸಂಗಸುಖ ಹಿಂಗಿತ್ತು. ಮಂಗಳದ ಮಹಾಬೆಳಗಿನಲ್ಲಿ ಓಲಾಡಿ ಸುಖಿಯಾದೆನಯ್ಯಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.
Transliteration Ayyā, nā martyadalli huṭṭi kaṣṭasansāri enisikoṇḍe. Kattaleyalli muḷugi karmakke guriyāguttiddaḍe, hetta tāyi emba gurusvāmi enna koraḷige gaṇḍanemba liṅgava kaṭṭidanu. Tandeyemba jaṅgamaliṅgavu enna prāṇakke prasādava ūḍidanu. Prāṇakke prasādavanūḍalāgale kattale hariyittu karma hiṅgittu mana battaleyāyittu citta suyidānavāyittu; niścintavāyittu. Nijava nem'mi nōḍuvannakka, enna atte māvaru aratuhōdaru attige nādiniyaru ettalōḍ'̔ihōdaru, Suttaliruva bandhugaḷella bayalādaru. Enna tande-tāyi kaṭṭida cikkandina gaṇḍana nōḍuva nōṭa hōgi, enna manakke sikkittu aṅgaliṅgavemba ubhayavaḷiyittu, saṅgasukha hiṅgittu. Maṅgaḷada mahābeḷaginalli ōlāḍi sukhiyādenayyā appaṇṇapriya cennabasavaṇṇā.