ಸದ್ಭಕ್ತನು ತನು ಮನ ಧನ ಪ್ರಾಣಾದಿಗಳನರ್ಪಿಸಿ,
ಸಕಲ ಸಾಕಾರ ದ್ರವ್ಯಾದಿಗಳೆಲ್ಲವೂ ಶಿವನ ಸೊಮ್ಮಾಗಿ,
ಅದೆಂತೆಂದಡೆ ಋಗ್ವೇದ,
'ಶಿವೋ ದಾತಾ ಶಿವೋ ಭೋಕ್ತಾ ಶಿವಸ್ಸರ್ವಮಿದಂ ಜಗತ್
ಶಿವೋ ಯಜತಿ ಸರ್ವತ್ರ ಯಶ್ಶಿವಸ್ಸೋ[s]ಹಮೇವ ಚ' ಎಂದುದಾಗಿ,
ಇದನರಿದು ದಾತೃ ಭೋಕ್ತೃ ಶಿವನೆಂದು,
ಅಹಂ ಮಮತೆಗಳಡಗಿ, ಸ್ವಾನುಭಾವವಳವಟ್ಟು,
ಬಾಗಿಲುಗಾಹಿಯಾಗಿ ದಾಸೋಹಮಂ ಮಾಡುವುದು,
ಇದು ಉತ್ತಮ ಕ್ರಿಯೆಯು.
ಇದು ಲಿಂಗದೊಡನೆ ಹುಟ್ಟಿ, ಲಿಂಗದೊಡನೆ ಬೆಳೆದು,
ಲಿಂಗದೊಡನೆ ಲೀಯವಹ
ಮಹಾಲಿಂಗಾಂಗಿಗಲ್ಲದೆ ಸಾಧ್ಯವಾಗದು.
ಇದು ಅಳವಡದಿರ್ದಡೆ ಸದ್ಭಕ್ತನು
ತನು, ಮನ, ಧನ, ಪ್ರಾಣ ಮುಂತಾಗಿ
ವಂಚನೆ ಇಲ್ಲದೆ ಸದ್ಭಕ್ತಿಯಿಂ ದಾಸೋಹಮಂ ಮಾಡುವುದು.
ಇದು ಮಧ್ಯಮ ಕ್ರಿಯೆಯು. ಇದು ಸಾಮಾನ್ಯರಿಗಳವಡದು.
ಇದು ಅಸಾಧ್ಯವು.
ಇದು ಅಳವಡದಿರ್ದಡೆ, ಸದ್ಭಕ್ತನು ತನ್ನ
ತನು ಮನ ಪ್ರಾಣಂಗಳ ಬಳಲಿಸಿ
ತನಗೆ ಪ್ರಿಯವಾದ ಪುತ್ರ ಮಿತ್ರ ಕಳತ್ರಾದಿಗಳಿಗೆ
ಹೇಗೆ ಸಕಲ ದ್ರವ್ಯಂಗಳಂ ಕೊಡುವನೋ
ಹಾಗೆ ಸ್ನೇಹದಿಂದ ದಾಸೋಹವ ಮಾಡುವುದು,
ಇದು ಕನಿಷ್ಠಕ್ರಿಯೆಯು.
ಇದು ಮಹಾಜ್ಞಾನಿಪುರುಷರಿಗಲ್ಲದೆ ಅಳವಡದು.
ಇದು ಅಳವಡದಿರ್ದಡೆ, ಶಕ್ತ್ಯಾನುಸಾರದಿಂ ಮಾಡುವುದು.
ಇದು ನಿಕೃಷ್ಟಕ್ರಿಯೆಯು.
ಅದೆಂತೆಂದಡೆ:
'ಶ್ರೂಯತಾಂ ಧರ್ಮಸರ್ವಸ್ವಂ ಶ್ರುತ್ವಾ ಚೈವಾವಧಾರ್ಯತಾಂ
ಆತ್ಮನಃ ಪ್ರತಿಕೂಲಂ ಚ ಪರೇಷಾಂ ನ ಸಮಾಚರೇತ್' ಎಂದುದಾಗಿ,
ಇದನರಿತು ತನ್ನಂತೆ ಭಾವಿಸಿಯಾದಡೂ
ದಾಸೋಹವ ಮಾಡಿ ಪ್ರಸನ್ನತೆಯ ಪಡೆವುದೇ
ಸದ್ಭಕ್ತನ ಪಥವು ನೋಡಾ.
ಇಂತಪ್ಪ ಉತ್ತಮ ಮಧ್ಯಮ ಕನಿಷ್ಠ ನಿಕೃಷ್ಟವೆಂಬ
ಈ ನಾಲ್ಕು ಪರ್ಯಾಯದಲ್ಲಾದಡೆಯೂ,
ಒಂದು ಪರ್ಯಾಯದಲ್ಲಿ ಭಾವಿಸಿಕೊಂಡು,
ತನುಮನಧನವನಿತ್ತು ಸ್ನೇಹದಿಂದ ದಾಸೋಹವ ಮಾಡಿ
ಪ್ರಸಾದವ ಪಡೆದು ಭೋಗಿಸಿ, ಭಕ್ತರಾಗಬೇಕು.
ಈ ಪ್ರಕಾರದಿಂದಲ್ಲದೆ, ಮುಕ್ತಿ ಇಲ್ಲ.
ಈ ಚತುರ್ವಿಧ ಕ್ರಿಯೆಗಳೊಳಗೆ
ಆವುದನು ಮಾಡದೆ, ದುಷ್ಕ್ರಿಯೆಯಲ್ಲಿ ವರ್ತಿಸುತ್ತ
ದಾಸೋಹವವಿಲ್ಲದೆ, ತನ್ನೊಡಲನೆ ಹೊರೆದಡೆ
ಅವನು ಸದ್ಭಕ್ತರೊಳಗೆ ಸಲ್ಲ, ಅವಂಗೆ ಪ್ರಸಾದವಿಲ್ಲ.
ಪ್ರಸಾದವಿಲ್ಲಾಗಿ ಮುಕ್ತಿ ಇಲ್ಲ, ಅವನು ಉಭಯಭ್ರಷ್ಟ.
ಇದನರಿತು ತನ್ನಂತೆ ಭಾವಿಸಿ,
ವಿಶ್ವಾಸದಿಂ ದಾಸೋಹವಂ ಮಾಡಲು,
ಇಹಸಿದ್ಧಿ, ಪರಸಿದ್ಧಿ, ಸರ್ವಸಿದ್ಧಿಯಯ್ಯ,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
Transliteration Sadbhaktanu tanu mana dhana prāṇādigaḷanarpisi,
sakala sākāra dravyādigaḷellavū śivana som'māgi,
adentendaḍe r̥gvēda,
'śivō dātā śivō bhōktā śivas'sarvamidaṁ jagat
śivō yajati sarvatra yaśśivas'sō[s]hamēva ca' endudāgi,
idanaridu dātr̥ bhōktr̥ śivanendu,
ahaṁ mamategaḷaḍagi, svānubhāvavaḷavaṭṭu,
bāgilugāhiyāgi dāsōhamaṁ māḍuvudu,
idu uttama kriyeyu.
Idu liṅgadoḍane huṭṭi, liṅgadoḍane beḷedu,
liṅgadoḍane līyavaha
mahāliṅgāṅgigallade sādhyavāgadu.
Idu aḷavaḍadirdaḍe sadbhaktanu
tanu, mana, dhana, prāṇa muntāgi
van̄cane illade sadbhaktiyiṁ dāsōhamaṁ māḍuvudu.
Idu madhyama kriyeyu. Idu sāmān'yarigaḷavaḍadu.
Idu asādhyavu.
Idu aḷavaḍadirdaḍe, sadbhaktanu tanna
tanu mana prāṇaṅgaḷa baḷalisi
Tanage priyavāda putra mitra kaḷatrādigaḷige
hēge sakala dravyaṅgaḷaṁ koḍuvanō
hāge snēhadinda dāsōhava māḍuvudu,
idu kaniṣṭhakriyeyu.
Idu mahājñānipuruṣarigallade aḷavaḍadu.
Idu aḷavaḍadirdaḍe, śaktyānusāradiṁ māḍuvudu.
Idu nikr̥ṣṭakriyeyu.
Adentendaḍe:
'Śrūyatāṁ dharmasarvasvaṁ śrutvā caivāvadhāryatāṁ
ātmanaḥ pratikūlaṁ ca parēṣāṁ na samācarēt' endudāgi,
idanaritu tannante bhāvisiyādaḍū
dāsōhava māḍi prasannateya paḍevudē
sadbhaktana pathavu nōḍā.
Intappa uttama madhyama kaniṣṭha nikr̥ṣṭavemba
ī nālku paryāyadallādaḍeyū,
ondu paryāyadalli bhāvisikoṇḍu,
tanumanadhanavanittu snēhadinda dāsōhava māḍi
Prasādava paḍedu bhōgisi, bhaktarāgabēku.
Ī prakāradindallade, mukti illa.
Ī caturvidha kriyegaḷoḷage
āvudanu māḍade, duṣkriyeyalli vartisutta
dāsōhavavillade, tannoḍalane horedaḍe
avanu sadbhaktaroḷage salla, avaṅge prasādavilla.
Prasādavillāgi mukti illa, avanu ubhayabhraṣṭa.
Idanaritu tannante bhāvisi,
Viśvāsadiṁ dāsōhavaṁ māḍalu,
ihasid'dhi, parasid'dhi, sarvasid'dhiyayya,
uriliṅgapeddipriya viśvēśvarā.