ವಿಕಾರಿಗೇಕೊ ವ್ರತ ನೇಮ ? ವಿಶ್ವಾಸಹೀನಂಗೇಕೊ ಭಕ್ತಿಕೃತ್ಯ ?
ವಂದಿಸಿ ನಿಂದಿಸುವಗೇಕೊ ಜಂಗಮಪೂಜೆ ?
ಲಿಂಗವೆಂದು ಅರ್ಚಿಸಿ, ಸಂಗವನರಿಯದ ಲಿಂಗಿಗಳಿಗೆಲ್ಲಿಯದೊ ಶಿವಲಿಂಗಪೂಜೆ ?
ಆರಂಗವ ತೊರೆಯದೆ, ಮೂರಂಗವ ಮೀರದೆ, ತೋರಿಪ್ಪ [ಗುಣವ] ಜರೆಯದೆ,
ಅರುವತ್ತುನಾಲ್ಕು ನೇಮವನರಿವ ಪರಿ ಇನ್ನೆಂತೊ ?
ಇಂತೀ ಗುಣವನರಿಯರಾಗಿ ಶೀಲವಂತರಿಗೆ ನೇಮವಿಲ್ಲ.
ಪಾತಕಂಗೆ ಭಕ್ತಿಯಿಲ್ಲ, ಪೂಜೆವಂತಂಗೆ ಲಿಂಗವಿಲ್ಲ.
ತ್ರಿವಿಧವ ಮರೆಯದವಂಗೆ ಜಂಗಮವಿಲ್ಲ.
ಇಂತೀ ಕಾಯಜೀವದ ಬೆಸುಗೆಯ ಬಿನ್ನಾಣವನರಿಯದವಂಗೆ ಪ್ರಾಣಲಿಂಗವಿಲ್ಲ.
ಇಂತಿವರಂಗ ಒಂದೂ ಇಲ್ಲದವಂಗೆ ನೀನೂ ನಾನೂ ಇಲ್ಲ,
ನಿಃಕಳಂಕ ಮಲ್ಲಿಕಾರ್ಜುನಾ.
Transliteration Vikārigēko vrata nēma? Viśvāsahīnaṅgēko bhaktikr̥tya?
Vandisi nindisuvagēko jaṅgamapūje?
Liṅgavendu arcisi, saṅgavanariyada liṅgigaḷigelliyado śivaliṅgapūje?
Āraṅgava toreyade, mūraṅgava mīrade, tōrippa [guṇava] jareyade,
aruvattunālku nēmavanariva pari innento?
Intī guṇavanariyarāgi śīlavantarige nēmavilla.
Pātakaṅge bhaktiyilla, pūjevantaṅge liṅgavilla.
Trividhava mareyadavaṅge jaṅgamavilla.
Intī kāyajīvada besugeya binnāṇavanariyadavaṅge prāṇaliṅgavilla.
Intivaraṅga ondū illadavaṅge nīnū nānū illa,
niḥkaḷaṅka mallikārjunā.