•  
  •  
  •  
  •  
Index   ವಚನ - 20    Search  
 
ಗುರುಭಕ್ತರು ವಾರ ತಿಥಿ ನಕ್ಷತ್ರ ವ್ಯತಿಪಾತ ಯೋಗ ಕರಣ ಶುಭಾಶುಭವ ನೋಡಲಾಗದು, ಕೇಳಲಾಗದು. ಅವರ ಮನೆಯಲ್ಲಿ ಬಾಲರಂಡೆ ಇಪ್ಪ ಕಾರಣ ಕೇಳಲಾಗದು. ವಾರ ತಿಥಿ ನಕ್ಷತ್ರ ಆರೈದು ಕೇಳಿದವರಿಗೆ ಗುರುವಿಲ್ಲ, ಶಿವನಿಲ್ಲ. ಅವರಿಗೆ ವಾರಗಳೇ ದೈವವಾಗಿಪ್ಪವು. ಇದಕ್ಕೆ ದೃಷ್ಟಾಂತ: ವಸಿಷ್ಠ ಮುನಿ ರಾಮ ಲಕ್ಷ್ಮಣರಿಗೆ ಒಳ್ಳೆ ಶುಭವೇಳೆಯ ಲಗ್ನವ ನೋಡಿ ತೆಗೆದುಕೊಟ್ಟನು. ಲಗ್ನವಾದ ಮೇಲೆ ಹೆಂಡತಿ ಸೀತೆಯನ್ನು ರಾವಣನೇಕೆ ಒಯ್ದ? ಮತ್ತೆ ಅವರು ದೇಶತ್ಯಾಗಿಯಾಗಿ ವನವಾಸವೇಕೆ ಹೋದರು? ಸಾಕ್ಷಿ: "ಕರ್ಮಣಾಂ ಹಿ ಪ್ರಧಾನತ್ವಂ ಕಿಂ ಕರೋತಿ ಶುಭಗ್ರಹಃ | ವಸಿಷ್ಠಾದಿ ಕೃತೇ ಲಗ್ನೇ ರಾಮಃ ಕಿಂ ಭ್ರಮತೇ ವನಂ||" ಎಂದುದಾಗಿ, ಈ ನಡತೆ ಭಕ್ತಗಣಂಗಳಿಗೆ ಸಮ್ಮತವಲ್ಲ. ಸಮ್ಮತ ಹೇಗೆಂದಡೆ : ಮದುವೆಯ ಮಾಡುವಲ್ಲಿ, ಊರು ಕೇರಿಗೆ ಹೋಗುವಲ್ಲಿ, ಪ್ರಸ್ಥವ ಮಾಡುವಲ್ಲಿ, ಕೆರೆ ಬಾವಿ ಅಗಿಸುವಲ್ಲಿ, ಸಮಸ್ತ ಕಾರ್ಯಕ್ಕೆ ಗುರುಲಿಂಗಜಂಗಮ ಭಕ್ತಗಣಂಗಳ ಕೇಳಿ, ಅವರು ಹೇಳಿದ ಹಾಗೆ ಕೇಳಿ ಅಪ್ಪಣೆಯ ತಕ್ಕೊಂಡು ಸಮಸ್ತ ಕಾರ್ಯವ ಮಾಡುವುದು. ಹೀಗೆ ನಂಬಿದವರಿಗೆ ಸಿದ್ಧಿಯಾಗುವುದು. ಅದು ಹೇಗೆಂದಡೆ : ನಕ್ಷತ್ರಫಲವ ಕೇಳಿಹೆನೆಂದಡೆ, ನಮ್ಮ ಗಣಂಗಳಾದ ರಾಜೇಂದ್ರಜೋಳ, ಚೇರಮರಾಯ, ಸೌಂದರ ಪಾಂಡ್ಯ ಈ ಮೂವರ ಸೀಮೆಯ ಮೇಲೆ ಮಳೆ ಬೀಳದಿದ್ದಡೆ ಆಗ ಮೂವರು ಕೂಡಿ ಸ್ವರ್ಗಕ್ಕೆ ಹೋಗಿ ಆ ಇಪ್ಪತ್ತೇಳು ನಕ್ಷತ್ರಗಳ ಮುಂಗೈ ಕಟ್ಟಿ ತಮ್ಮ ಊರಿಗೆ ತಂದು ಸೆರೆಮನೆಯೊಳಗೆ ಹಾಕಿದುದ ಜಗವೆಲ್ಲ ಬಲ್ಲುದು. ಅಂದಿನ ಗಣಂಗಳು ಇಂದಿದ್ದಾರೆಂದು ನಂಬಿದವರಿಗೆ ಬೇಡಿದ್ದನೀವ ನಮ್ಮ ಶಾಂತಕೂಡಲಸಂಗಮದೇವ
Transliteration Gurubhaktaru vāra tithi nakṣatra vyatipāta yōga karaṇa śubhāśubhava nōḍalāgadu, kēḷalāgadu. Avara maneyalli bālaraṇḍe ippa kāraṇa kēḷalāgadu. Vāra tithi nakṣatra āraidu kēḷidavarige guruvilla, śivanilla. Avarige vāragaḷē daivavāgippavu. Idakke dr̥ṣṭānta: Vasiṣṭha muni rāma lakṣmaṇarige oḷḷe śubhavēḷeya lagnava nōḍi tegedukoṭṭanu. Lagnavāda mēle heṇḍati sīteyannu rāvaṇanēke oyda? Matte avaru dēśatyāgiyāgi vanavāsavēke hōdaru? Sākṣi: Karmaṇāṁ hi pradhānatvaṁ kiṁ karōti śubhagrahaḥ | vasiṣṭhādi kr̥tē lagnē rāmaḥ kiṁ bhramatē vanaṁ||Endudāgi, ī naḍate bhaktagaṇaṅgaḷige sam'matavalla. Sam'mata hēgendaḍe: Maduveya māḍuvalli, ūru kērige hōguvalli, prasthava māḍuvalli, kere bāvi agisuvalli, samasta kāryakke guruliṅgajaṅgama bhaktagaṇaṅgaḷa kēḷi, avaru hēḷida hāge kēḷi appaṇeya takkoṇḍu samasta kāryava māḍuvudu. Hīge nambidavarige sid'dhiyāguvudu. Adu hēgendaḍe: Nakṣatraphalava kēḷihenendaḍe, nam'ma gaṇaṅgaḷāda rājēndrajōḷa, cēramarāya, saundara pāṇḍya ī mūvara sīmeya mēle maḷe bīḷadiddaḍe āga mūvaru kūḍi svargakke hōgiĀ ippattēḷu nakṣatragaḷa muṅgai kaṭṭi tam'ma ūrige tandu seremaneyoḷage hākiduda jagavella balludu. Andina gaṇaṅgaḷu indiddārendu nambidavarige bēḍiddanīva nam'ma śāntakūḍalasaṅgamadēva