•  
  •  
  •  
  •  
Index   ವಚನ - 21    Search  
 
ನಿರಾಕಾರ ಪರವಸ್ತು ತನ್ನ ಲೀಲಾವಿನೋದದಿಂದ ಎರಡು ಮುಖದಿಂದ ಎರಡು ಸೃಷ್ಟಿಯ ಮಾಡಿದರು. ಒಂದು ಊರ್ಧ್ವಸೃಷ್ಟಿ, ಒಂದು ಅಧೋಸೃಷ್ಟಿ. ಅಧೋಸೃಷ್ಟಿ ಯಾವುದೆಂದಡೆ : ಅಂಡಜ ಪಿಂಡಜ ಜರಾಯುಜ ಉದ್ಭಿಜ ಇವು ನಾಲ್ಕು ಕೂಡಿ ಎಂಬತ್ತುನಾಲ್ಕು ಜೀವರಾಶಿಯ ಮಾಡಿದರು. ಸ್ವರ್ಗ ನರಕ ಇಹ ಪರ ಪುಣ್ಯ ಪಾಪ ಧರ್ಮ ಕರ್ಮ ಸತ್ಯ ಅಸತ್ಯ ಜ್ಞಾನ ಅಜ್ಞಾನ ಹೆಣ್ಣು ಗಂಡು ಹಿರಿದು ಕಿರಿದು ಉತ್ಪತ್ತಿ-ಸ್ಥಿತಿ-ಲಯಕ್ಕೆ ಅಧಿಕಾರಿಗಳಾದ ಬ್ರಹ್ಮ-ವಿಷ್ಣು-ರುದ್ರರು ಮಾಡಿಟ್ಟರು. ಇನ್ನು ಊರ್ಧ್ವಸೃಷ್ಟಿ ಹೇಗೆಂದಡೆ : ಅಸಂಖ್ಯಾತ ಮಹಾಪ್ರಮಥಗಣಂಗಳು, ಇವರಿಗೆ ಸ್ವರ್ಗ-ನರಕವಿಲ್ಲ, ಇಹ-ಪರವಿಲ್ಲ, ಪುಣ್ಯ-ಪಾಪವಿಲ್ಲ, ಧರ್ಮ-ಕರ್ಮವಿಲ್ಲ, ಹುಸಿ-ಖರೆಯಿಲ್ಲ, ಜ್ಞಾನ-ಅಜ್ಞಾನವಿಲ್ಲ, ಹೆಣ್ಣು-ಗಂಡುವಿಲ್ಲ, ಹಿರಿದು-ಕಿರಿದುವಿಲ್ಲ, ಉತ್ಪತ್ತಿ-ಸ್ಥಿತಿ-ಲಯವಿಲ್ಲ, ಅವರಿಗೆ ಬ್ರಹ್ಮ-ವಿಷ್ಣು ರುದ್ರರು ಇಲ್ಲ. ಅವರಿಗೆ ಮತ್ತಂ, ಆ ನಿರಾಕಾರ ಪರವಸ್ತು ತಾನೆ ಗುರು-ಲಿಂಗ-ಜಂಗಮವಾಗಿ ಗುರುವಿನಲ್ಲಿ ಉತ್ಪತ್ತಿ, ಲಿಂಗದಲ್ಲಿ ಸ್ಥಿತಿ, ಜಂಗಮದಲ್ಲಿ ನಿಜೈಕ್ಯರು. ಮತ್ತೆ ಪರಶಿವಮೂರ್ತಿ ತನ್ನ ವಿನೋದಕ್ಕೆ ಆಟವ ಆಡಬೇಕಾಗಿ ಮಹದಾಕಾಶವ ಮಂಟಪವ ಮಾಡಿ, ಆಕಾಶವ ಪರದೆಯ ಕಟ್ಟಿ, ಅಸಂಖ್ಯಾತ ಪ್ರಮಥಗಣಂಗಳಿಗೆ ಮೂರ್ತವ ಮಾಡಿಸಿ ಎಂಬತ್ತುನಾಲ್ಕುಲಕ್ಷ ಜೀವರಾಶಿಗಳನೆ ಸೂತ್ರವ ಮಾಡಿ ತಮ್ಮ ಕೈಯಲ್ಲಿ ಪಿಡಿದು, ಚಿತ್ರವಿಚಿತ್ರದಾಟವ ಆಡಿಸುತ್ತಿಹುದಕ್ಕೆ ಲೆಕ್ಕವಿಲ್ಲ, ಹೇಳುವುದಕ್ಕೆ ಅಸಾಧ್ಯ. ಆ ಪ್ರಮಥಗಣಂಗಳು ನೋಡಿ, ಆ ಬೊಂಬೆಗಳೇನು ಆಡಿಹವು? ಸೂತ್ರಿಕನು ಆಡಿಸಿದ ಹಾಂಗೆ ಆಡ್ಯಾವು. ಆ ಗೊಂಬೆಗೆ ಸೂತ್ರವಲ್ಲದೆ ಶಿವನಿಲ್ಲ. ಆ ಗೊಂಬೆಯೊಳಗೆ ಶಿವನಿದ್ದರೆ, ಆಡಿಸುವುದು ಹ್ಯಾಂಗೆ? ಇವೆಲ್ಲವು ಅನಿತ್ಯವೆಂದು ತಿಳಿದು ಪ್ರಮಥಗಣಂಗಳು ತಮ್ಮ ಲಿಂಗದಲ್ಲಿ ನಿಜ ಮೋಕ್ಷಿಗಳಾಗಿ ಶಾಂಭವಪುರಕ್ಕೆ ಹೋದ ಭೇದವ ಎನ್ನೊಳರುಹಿದಾತ ನಮ್ಮ ಶಾಂತಕೂಡಲಸಂಗಮದೇವ
Transliteration Nirākāra paravastu tanna līlāvinōdadinda eraḍu mukhadinda eraḍu sr̥ṣṭiya māḍidaru. Ondu ūrdhvasr̥ṣṭi, ondu adhōsr̥ṣṭi. Adhōsr̥ṣṭi yāvudendaḍe: Aṇḍaja piṇḍaja jarāyuja udbhija ivu nālku kūḍi embattunālku jīvarāśiya māḍidaru. Svarga naraka iha para puṇya pāpa dharma karma satya asatya jñāna ajñāna heṇṇu gaṇḍu hiridu kiridu utpatti-sthiti-layakke adhikārigaḷāda brahma-viṣṇu-rudraru māḍiṭṭaru. Innu ūrdhvasr̥ṣṭi hēgendaḍe: Asaṅkhyāta mahāpramathagaṇaṅgaḷu, ivarige svarga-narakavilla, iha-paravilla, puṇya-pāpavilla,Dharma-karmavilla, husi-khareyilla, jñāna-ajñānavilla, heṇṇu-gaṇḍuvilla, hiridu-kiriduvilla, utpatti-sthiti-layavilla, avarige brahma-viṣṇu rudraru illa. Avarige mattaṁ, ā nirākāra paravastu tāne guru-liṅga-jaṅgamavāgi guruvinalli utpatti, liṅgadalli sthiti, jaṅgamadalli nijaikyaru. Matte paraśivamūrti tanna vinōdakke āṭava āḍabēkāgi mahadākāśava maṇṭapava māḍi, ākāśava paradeya kaṭṭi, asaṅkhyāta pramathagaṇaṅgaḷige mūrtava māḍisi embattunālkulakṣa jīvarāśigaḷane sūtrava māḍiTam'ma kaiyalli piḍidu, citravicitradāṭava āḍisuttihudakke lekkavilla, hēḷuvudakke asādhya. Ā pramathagaṇaṅgaḷu nōḍi, ā bombegaḷēnu āḍ'̔ihavu? Sūtrikanu āḍisida hāṅge āḍyāvu. Ā gombege sūtravallade śivanilla. Ā gombeyoḷage śivaniddare, āḍisuvudu hyāṅge? Ivellavu anityavendu tiḷidu pramathagaṇaṅgaḷu tam'ma liṅgadalli nija mōkṣigaḷāgi śāmbhavapurakke hōda bhēdava ennoḷaruhidāta nam'ma śāntakūḍalasaṅgamadēva