•  
  •  
  •  
  •  
Index   ವಚನ - 24    Search  
 
ಲಿಂಗವೆ ನಿಮ್ಮ ನೆನೆವ ಮನಕ್ಕೆ ಹೊನ್ನ ತೋರಿ, ನಿಮ್ಮ ನೋಡುವ ನೋಟಕ್ಕೆ ಹೆಣ್ಣ ತೋರಿ, ನಿಮ್ಮ ಪೂಜಿಸುವ ಕೈಗೆ ಮಣ್ಣ ತೋರಿ, ಮತ್ತೆ ಗಣಂಗಳ ಸಾಕ್ಷಿಯಾಗಿದ್ದುದ ತಿಳಿದು ಅವರಿಗೆ ಅಂಜಿ ಮನದ ಕೊನೆಯಲ್ಲಿ ಮಂತ್ರರೂಪಾಗಿ ನಿಂದ ಕಾರಣ ಹೊನ್ನಿನ ನೆನಹು ಕೆಟ್ಟಿತ್ತು ನೋಡಾ! ಪರಶಿವಮೂರ್ತಿಯ ಮುದ್ದುಮೊಗದ ತುಟಿಯಲ್ಲಿ ಹುಟ್ಟಿದ ಓಂಕಾರನಾದಾಮೃತವ ಚುಂಬನವ ಮಾಡಲಿಕ್ಕೆ ಹೆಣ್ಣಿನ ನೋಟ ಕೆಟ್ಟಿತ್ತು. ಕರಕಮಲ ಗದ್ದುಗೆಯ ಮಾಡಿದ ಕಾರಣ ಮಣ್ಣಿನ ಧಾವತಿ ಬಿಟ್ಟುಹೋಯಿತ್ತು. ಇಂತು ಮಾಡಿದಿರಿ ಲಿಂಗವೆ, ಮತ್ತೆ ನಿಮ್ಮ ಬೇಡಿದಡೆ ಅಷ್ಟೈಶ್ವರ್ಯ ಚತುರ್ವಿಧಪದಗಳನು ಕೊಡುವಿರಿ. ಇವೆಲ್ಲ ಅಲ್ಪಸುಖ, ತಾಮಸಕಿಕ್ಕುವವು. ಮತ್ತೆ ನಮ್ಮ ಗಣಂಗಳ ಮನೆಯಲ್ಲಿ ಕೇಡಿಲ್ಲದಂತಹ ನಿತ್ಯವಾದ ವಸ್ತು ಅಷ್ಟೈಶ್ವರ್ಯಗಳುಂಟು, ನಿಧಿ ನಿಧಾನಗಳುಂಟು, ಇದಕ್ಕೆ ನಾವು ನೀವು ಬೇಡಿಕೊಂಬುವ ಬನ್ನಿರಿ. ಅವರಿರುವ ಸ್ಥಲವ ತೋರಿಕೊಡಿ ಎಲೆ ಲಿಂಗವೆ. ಅವರು ಎಲ್ಲಿ ಐದಾರೆಯೆಂದಡೆ : ಏಳುಪ್ಪರಿಗೆಯೊಳಗಿಪ್ಪರು. ಅವರ ನಾಮವ ಪೇಳ್ವೆನು - ಪಶ್ಚಿಮಚಕ್ರದಲ್ಲಿ ನಿರಂಜನ ಜಂಗಮವು, ಗುರು-ಹಿರಿಯರು ಅಸಂಖ್ಯಾತ ಮಹಾಗಣಂಗಳು ಸಹವಾಗಿಪ್ಪರು. ಅವರ ಮಧ್ಯದಲ್ಲಿ ನೀವೆ ನಾವಾಗಿ ಬೇಡಿಕೊಂಬೆವು. ಬೇಡಿಕೊಂಡ ಮೇಲೆ ಅವರು ಕೊಟ್ಟ ವಸ್ತುವ ಹೇಳಿಹೆನು ಕೇಳಿರೆ ಲಿಂಗವೆ. ಅವು ಯಾವುವೆಂದಡೆ : ಜೀವಾತ್ಮ ಅಂತರಾತ್ಮ ಪರಮಾತ್ಮರೆಂಬ ಆತ್ಮತ್ರಯರು, ಹೇಮಾದ್ರಿ ರಜತಾದ್ರಿ ಮಂದರಾದ್ರಿಯೆಂಬ ಮೇರುಗಳ ಸೆಜ್ಜೆಯ ಮಾಡಿ, ವಾಯುವನೆ ಶಿವದಾರವ ಮಾಡಿ, ತನುತ್ರಯವನೆ ವಸ್ತ್ರವ ಮಾಡಿ, ಇವುಗಳನೆ ಅವರು ನಮಗೆ ಕೊಟ್ಟರು. ಅಲ್ಲದೆ ಪರಸ್ತ್ರೀಯರ ಅಪ್ಪದ ಹಾಗೆ ನಿಃಕಾಮವೆಂಬ ಉಡುಗೊರೆಯ ಮಾಡಿ ಕಟ್ಟಿನಲ್ಲಿಟ್ಟರು. ಕುಶಬ್ದವ ಕೇಳದ ಹಾಗೆ ಬಲದ ಕರ್ಣದಲ್ಲಿ ಷಡಕ್ಷರವೆಂಬ ವಸ್ತುವ ಮಾಡಿಯಿಟ್ಟರು. ಪಂಚಾಂಗುಲಿಗೆ ಪಂಚಾಕ್ಷರವೆ ಐದುಂಗುರವ ಮಾಡಿಯಿಟ್ಟರು. ನೂರೆಂಟು ನಾಮ ಹರಗಣ ಕೊರಳಲಿ ಹಾಕಿದರು. ಆಪತ್ತಿಗೆ ಅಂಜಬೇಡೆಂದು ವಿಭೂತಿಧೂಳನ ಧಾರಣವಮಾಡಿ ಜೋಡಂಗಿಯ ಮಾಡಿ ತೊಡಿಸಿದರು. ಗಣಂಗಳು ಹೋದ ಹಾದಿಯನೆ ಮುಂಡಾಸವ ಮಾಡಿ ತಲೆಗೆ ಸುತ್ತಿದರು. ಆವ ಕಂಟಕವು ಬಾರದ ಹಾಗೆ ಗಣಂಗಳ ಪಾದಧೂಳನವ ಸೆಲ್ಲೆಯ ಮಾಡಿ ಹೊದಿಸಿದರು. ಭಕ್ತಿಯೆಂಬ ನಿಧಾನವ ಕೊಟ್ಟು, ಭಾವದಲ್ಲಿ ಬಚ್ಚಿಟ್ಟುಕೊಳ್ಳಿರಿ ಎಂದರು. ಅಷ್ಟಾವರಣವೆ ನಿಧಿನಿಧಾನವೆಂದು ಹೇಳಿದರು. ಇವೆಲ್ಲ ವಸ್ತುಗಳ ನಿಮ್ಮ ನೋಡಿ ಕೊಟ್ಟರಲ್ಲದೆ ಬೇರಿಲ್ಲ. ನಿಮ್ಮ ದಾಸಾನುದಾಸಯೆಂದು ನಿಮ್ಮೊಡವೆಯ ನಿಮಗೊಪ್ಪಿಸು ಎಂದರುಹಿದಾತ ನಮ್ಮ ಶಾಂತಕೂಡಲಸಂಗಮದೇವ
Transliteration Liṅgave nim'ma neneva manakke honna tōri, nim'ma nōḍuva nōṭakke heṇṇa tōri, nim'ma pūjisuva kaige maṇṇa tōri, matte gaṇaṅgaḷa sākṣiyāgidduda tiḷidu avarige an̄ji manada koneyalli mantrarūpāgi ninda kāraṇa honnina nenahu keṭṭittu nōḍā! Paraśivamūrtiya muddumogada tuṭiyalli huṭṭida ōṅkāranādāmr̥tava cumbanava māḍalikke heṇṇina nōṭa keṭṭittu. Karakamala gaddugeya māḍida kāraṇa maṇṇina dhāvati biṭṭuhōyittu. Intu māḍidiri liṅgave, matte nim'ma bēḍidaḍeAṣṭaiśvarya caturvidhapadagaḷanu koḍuviri. Ivella alpasukha, tāmasakikkuvavu. Matte nam'ma gaṇaṅgaḷa maneyalli kēḍilladantaha nityavāda vastu aṣṭaiśvaryagaḷuṇṭu, nidhi nidhānagaḷuṇṭu, idakke nāvu nīvu bēḍikombuva banniri. Avariruva sthalava tōrikoḍi ele liṅgave. Avaru elli aidāreyendaḍe: Ēḷupparigeyoḷagipparu. Avara nāmava pēḷvenu - paścimacakradalli niran̄jana jaṅgamavu, guru-hiriyaru asaṅkhyāta mahāgaṇaṅgaḷu sahavāgipparu. Avara madhyadalli nīve nāvāgi bēḍikombevu.Bēḍikoṇḍa mēle avaru koṭṭa vastuva hēḷihenu kēḷire liṅgave. Avu yāvuvendaḍe: Jīvātma antarātma paramātmaremba ātmatrayaru, hēmādri rajatādri mandarādriyemba mērugaḷa sejjeya māḍi, vāyuvane śivadārava māḍi, tanutrayavane vastrava māḍi, ivugaḷane avaru namage koṭṭaru. Allade parastrīyara appada hāge niḥkāmavemba uḍugoreya māḍi kaṭṭinalliṭṭaru. Kuśabdava kēḷada hāge balada karṇadalli ṣaḍakṣaravemba vastuva māḍiyiṭṭaru. Pan̄cāṅgulige pan̄cākṣarave aiduṅgurava māḍiyiṭṭaru.Nūreṇṭu nāma haragaṇa koraḷali hākidaru. Āpattige an̄jabēḍendu vibhūtidhūḷana dhāraṇavamāḍi jōḍaṅgiya māḍi toḍisidaru. Gaṇaṅgaḷu hōda hādiyane muṇḍāsava māḍi talege suttidaru. Āva kaṇṭakavu bārada hāge gaṇaṅgaḷa pādadhūḷanava selleya māḍi hodisidaru. Bhaktiyemba nidhānava koṭṭu, bhāvadalli bacciṭṭukoḷḷiri endaru. Aṣṭāvaraṇave nidhinidhānavendu hēḷidaru. Ivella vastugaḷa nim'ma nōḍi koṭṭarallade bērilla. Nim'ma dāsānudāsayendu nim'moḍaveya nimagoppisu endaruhidāta nam'ma śāntakūḍalasaṅgamadēva