ಜೀವನ್ಮುಕ್ತಿ ಯಾವುದೆಂದಡೆ
ಹೇಳಿಹೆ ಕೇಳಿರಯ್ಯಾ.
ಜೀವನ ಬುದ್ಧಿಯ ಬಿಟ್ಟುದು ಜೀವನ್ಮುಕ್ತಿ.
ಜೀವನ ಬುದ್ಧಿ ಯಾವುದೆಂದಡೆ:
ಜ್ಞಾನಗುರುಗಳಿಂದ ಜ್ಞಾನವ ಪಡೆದು
ಅಂಗಲಿಂಗಸಂಗ ಸಮರಸವಾದುದೇ ಜೀವನ್ಮುಕ್ತಿ.
ಇಂಥದ ಬಿಟ್ಟು ತಾನು ಮಂಗಬುದ್ಧಿಯಿಂದ ನಡೆದು
ಜ್ಞಾನಪ್ರಕಾಶವ ಕಾಣಲಿಲ್ಲವೆಂದು
ಮತ್ತೊಬ್ಬ ಗುರುಗಳಲ್ಲಿ ತಿಳಿಯಬೇಕೆಂಬರು.
ಅವರಲ್ಲಿ ಏನು ಇದ್ದಿತೊ!
ಹೀಗೆಂಬುದೇ ಜೀವನ ಬುದ್ದಿಯು.
ಹೊಲವ ಬಿತ್ತುವ ಒಕ್ಕಲಿಗ ಯಾವನಾದಡೆ ಆಗಲಿ
ಬೀಜವ ಬಿತ್ತುವ ಪರಿ ಒಂದೇ.
ಮತ್ತೆ ಗೊಲ್ಲಾಳಯ್ಯಂಗೆ ಕುರಿಯ ಹಿಕ್ಕೆಯ ದೃಢದಿಂದ ಪೂಜಿಸಿ
ಗುರು ಪ್ರಸನ್ನತೆಯ ಹಡೆದುದಿಲ್ಲವೆ?
ಅವಿಶ್ವಾಸದಿಂದೆ, ಅಂಗಬುದ್ಧಿಯಿಂದೆ
ಹಲವು ಗುರು, ಹಲವು ಲಿಂಗ ಅರ್ಚಿಸಿ ಪೂಜಿಸಿ
ಹಲವು ಭವದಲ್ಲಿ ಬಂದರು ನೋಡಾ!
ಜೀವನ ಬುದ್ಧಿ ಎಂತೆಂದಡ :
ಆಶೆ ರೋಷ ಅಹಂಕಾರ ಅರಿಷಡ್ವರ್ಗಂಗಳು
ಅಷ್ಟಮದಂಗಳು, ಅನೃತ,
ಪರಧನ, ಪರಸ್ತ್ರೀ, ಪರನಿಂದೆ, ಪರಹಿಂಸೆ
ಇವೆಲ್ಲವೂ ಜೀವನಬುದ್ಧಿ.
ಇಂತಿವೆಲ್ಲವ ಒಳಗಿಟ್ಟುಕೊಂಡು
ನಾವು ಜೀವನ್ಮುಕ್ತರೆಂಬರು ಎಂತಹರೋ ನೋಡಾ!
ದೀಪವೆಂದಡೆ ಕತ್ತಲೆ ಹೋಯಿತ್ತೆ?
ಅಮೃತವೆಂದಡೆ ಹಸಿವು ಹೋಯಿತ್ತೆ?
ಉದಕವೆಂದಡೆ ತೃಷೆ ಹೋಯಿತ್ತೆ?
ಇಂಥವರಿಗೆ ಮುಕ್ತಿಯಿಲ್ಲವಯ್ಯಾ.
ಮತ್ತೆ ಜೀವನ್ಮುಕ್ತಿ ಹೇಗೆಂದಡೆ -
ಶರಣಸತಿ ಲಿಂಗಪತಿಯೆಂಬ
ಭೇದವ ತಿಳಿದಡೆ ಜೀವನ್ಮುಕ್ತಿ.
ಈ ತ್ರಿವಿಧತನವು ಮೀಸಲಾಗಿ
ತ್ರಿವಿಧಲಿಂಗಕ್ಕೆ ಅರ್ಪಿಸಬಲ್ಲಾತನೆ ಜೀವನ್ಮುಕ್ತನು ಎಂದಾತ
ನಮ್ಮ ಶಾಂತಕೂಡಲಸಂಗಮದೇವ
Transliteration Jīvanmukti yāvudendaḍe
hēḷihe kēḷirayyā.
Jīvana bud'dhiya biṭṭudu jīvanmukti.
Jīvana bud'dhi yāvudendaḍe:
Jñānagurugaḷinda jñānava paḍedu
aṅgaliṅgasaṅga samarasavādudē jīvanmukti.
Inthada biṭṭu tānu maṅgabud'dhiyinda naḍedu
jñānaprakāśava kāṇalillavendu
mattobba gurugaḷalli tiḷiyabēkembaru.
Avaralli ēnu iddito!
Hīgembudē jīvana buddiyu.
Holava bittuva okkaliga yāvanādaḍe āgali
bījava bittuva pari ondē.
Matte gollāḷayyaṅge kuriya hikkeya dr̥ḍhadinda pūjisi
Guru prasannateya haḍedudillave?
Aviśvāsadinde, aṅgabud'dhiyinde
halavu guru, halavu liṅga arcisi pūjisi
halavu bhavadalli bandaru nōḍā!
Jīvana bud'dhi entendaḍa:
Āśe rōṣa ahaṅkāra ariṣaḍvargaṅgaḷu
aṣṭamadaṅgaḷu, anr̥ta,
paradhana, parastrī, paraninde, parahinse
ivellavū jīvanabud'dhi.
Intivellava oḷagiṭṭukoṇḍu
nāvu jīvanmuktarembaru entaharō nōḍā!
Dīpavendaḍe kattale hōyitte?
Amr̥tavendaḍe hasivu hōyitte?
Udakavendaḍe tr̥ṣe hōyitte?
Inthavarige muktiyillavayyā.Matte jīvanmukti hēgendaḍe -
śaraṇasati liṅgapatiyemba
bhēdava tiḷidaḍe jīvanmukti.
Ī trividhatanavu mīsalāgi
trividhaliṅgakke arpisaballātane jīvanmuktanu endāta
nam'ma śāntakūḍalasaṅgamadēva