ದೇಹದೊಡನೆ ತ್ರಿದೋಷಗಳು,
ವಾತ ಪಿತ್ತ ಶ್ಲೇಷ್ಮ-ಇವು ಮೂರುಕೂಡಿ ದೇಹ ಹುಟ್ಟಿತು.
ಇದರ ವಿವರವು :
ವಾತ 81, ಪಿತ್ತ 64, ಶ್ಲೇಷ 215.
ಇವು ಕೂಡಿ 360 ವ್ಯಾಧಿಗಳಾದವು.
ಇವು ಶಿವನ ಅಪ್ಪಣೆಯಿಂದ ಬಂದುವಲ್ಲದೆ,
ಮನುಷ್ಯನ ಯತ್ನವಿಲ್ಲವು.
ಅದಕ್ಕೆ ಮನುಷ್ಯರು ವೈದ್ಯವ ಮಾಡಿದಡೆ
ಲೋಕ ಏಕೆ ಸಾವುದು?
ಅದಕ್ಕೆ ಸೊಕ್ಕಿದವರಿಗೆ, ಗುರುತಲ್ಪಕರಿಗೆ,
ಭಕ್ತರ ನಿಂದ್ಯವ ಮಾಡಿದವರಿಗೆ,
ತಂದೆಗೆ ಮಗ ಬೈದರೆ, ಅತ್ತೆಗೆ ಸೊಸೆ ಸೊಕ್ಕಿ ನುಡಿದಡೆ,
ಅನಾಚಾರಿಗಳಿಗೆ, ಆಸೆಯ ಕೊಟ್ಟು ಭಾಷೆಗೆ ತಪ್ಪಿದವರಿಗೆ,
ಶಿವಸದ್ವರ್ತನೆ ಸದ್ಧರ್ಮ ಸದಾಚಾರವಿಲ್ಲದವರಿಗೆ
ಈ ವ್ಯಾಧಿಗಳು ಕಾಡುತ್ತಿಹವು.
ತಲೆಶೂಲೆ, ಪಕ್ಕಶೂಲೆ, ಜ್ವರ, ಉರಿ
-ಇವು ಕಣ್ಣಿಗೆ ಕಾಣಿಸದೆ ಬಂದಂಥ ವ್ಯಾಧಿಗಳು;
ಶಿವನ ಅಂಶಿಕವು.
ತದ್ದು ತುರಿ ಕೆಮ್ಮು ಭಗದಳ ಕುಷ್ಠ ಗಂಡಮಾಲೆ
ಕುರು ಬಾವು ಹುಣ್ಣುಗಳು
ಕಣ್ಣಿಗೆ ಕಾಣಿಸುವಂಥ ಬೇನೆಗಳು;
ಪಾರ್ವತಿಯ ಅಂಶಿಕವು.
ಇವು ಎಲ್ಲ ವ್ಯಾಧಿಗಳು ಅವರಿಗೆ ತಕ್ಕಷ್ಟು
ಶಿಕ್ಷೆ ಮಾಡಿಸುತ್ತಿಹವು.
ಮತ್ತೆ ಗುರುಮಾರ್ಗಾಚಾರವಿಡಿದು ಆಚರಿಸುವ ಪ್ರಸಾದಿಗಳಿಗೆ
ಅವೇ ವ್ಯಾಧಿಗಳು ಹಿತವಾಗಿಹವು.
ಮತ್ತೆ ಸರ್ಪ ಕಚ್ಚಿದಡೆ, ಸ್ತ್ರೀಯು ಹಡೆಯಲಾರದಿದ್ದಡೆ,
ಯಾವ ಕುಲದವನಾಗಲಿ ವಿಚಾರಿಸದೆ
ಅವರು ಮಂತ್ರಿಸಿದ ಉದಕವ ಕುಡಿವುದು.
ಮತ್ತೆ ಅವರ ಕುಲಕ್ಕೆ ಭಕ್ತರ ಕುಲಕ್ಕೆ ಹೇಸುವುದು.
ಅನ್ಯಕುಲದ ವೈದ್ಯನ ಕೈಯಲ್ಲಿ ಮದ್ದು ಮಾಡಿಸಿಕೊಂಬರು.
ಭಕ್ತರು ಅಡುಗೆಯ ಮಾಡಿದಡೆ, ಯಾವ ಕುಲವೆಂಬರು?
ಅವರಿಗೆ ಎಂದೆಂದಿಗೂ ಮುಕ್ತಿಯಿಲ್ಲವಯ್ಯಾ.
ಮತ್ತೆ ಪ್ರಸಾದವ ಕೊಂಬುವರು ಮದ್ದು ಕೇಳಲಾಗದು.
ಅದೇನುಕಾರಣವೆಂದಡೆ-
ಪ್ರಸಾದಕ್ಕಿಂತ ಮದ್ದು ಹಿತವಾಯಿತಲ್ಲ!
ಶಿವಮಂತ್ರ ಕಾಯಕ್ಕೆ
ಅನ್ಯರ ಕೈಯಲ್ಲಿ ಮಂತ್ರಿಸಿ ಕೇಳಲಾಗದು.
ಅದೇನು ಕಾರಣವೆಂದಡೆ -
ಶಿವಮಂತ್ರಕ್ಕಿಂತ ಅನ್ಯರ ಮಂತ್ರ ಅಧಿಕವಾಯಿತ್ತಲ್ಲ!
ಮತ್ತೆ ವೈದ್ಯಕಾರನಿಂದ ಮಂತ್ರಗಾರನಿಂದ
ಮನುಷ್ಯರ ಪ್ರಾಣ ಉಳಿವುದೆಂದು
ಯಾವ ಶಾಸ್ತ್ರ ಹೇಳುತ್ತದೆ?
ಯಾವ ಆಗಮ ಸಾರುತ್ತದೆ? ಹೇಳಿರಿ.
ಅರಿಯದಿದ್ದಡೆ ಕೇಳಿರಿ:
ಭಕ್ತಗಣಂಗಳು ಪಾದೋದಕ ಪ್ರಸಾದ
ವಿಭೂತಿ ಶಿವಮಂತ್ರಗಳಿಂದೆ
ಲೆಕ್ಕವಿಲ್ಲದೆ ಹೋಹ ಪ್ರಾಣವ ಪಡೆದರು -
ಎಂದು ಬಸವೇಶ್ವರ ಪುರಾಣದಲ್ಲಿ ಕೂಗ್ಯಾಡುತ್ತದೆ.
ಇಂತಪ್ಪ ದೃಷ್ಟವ ಕಂಡು ನಂಬದಿರ್ದಡೆ
ಆವಿನ ಕೆಚ್ಚಲೊಳಗೆ ಉಣ್ಣೆಯಿದ್ದು
ಹಾಲು ಬಿಟ್ಟು ರಕ್ತವ ಸೇವಿಸುವಂತಾಯಿತ್ತು ಎಂದಾತ
ನಮ್ಮ ಶಾಂತಕೂಡಲಸಂಗಮದೇವ
Transliteration Dēhadoḍane tridōṣagaḷu,
vāta pitta ślēṣma-ivu mūrukūḍi dēha huṭṭitu.
Idara vivaravu:
Vāta 81, pitta 64, ślēṣa 215.
Ivu kūḍi 360 vyādhigaḷādavu.
Ivu śivana appaṇeyinda banduvallade,
manuṣyana yatnavillavu.
Adakke manuṣyaru vaidyava māḍidaḍe
lōka ēke sāvudu?
Adakke sokkidavarige, gurutalpakarige,
bhaktara nindyava māḍidavarige,
tandege maga baidare, attege sose sokki nuḍidaḍe,
anācārigaḷige, āseya koṭṭu bhāṣege tappidavarige,
śivasadvartane sad'dharma sadācāravilladavarige
ī vyādhigaḷu kāḍuttihavu.Taleśūle, pakkaśūle, jvara, uri
-ivu kaṇṇige kāṇisade bandantha vyādhigaḷu;
śivana anśikavu.
Taddu turi kem'mu bhagadaḷa kuṣṭha gaṇḍamāle
kuru bāvu huṇṇugaḷu
kaṇṇige kāṇisuvantha bēnegaḷu;
pārvatiya anśikavu.
Ivu ella vyādhigaḷu avarige takkaṣṭu
śikṣe māḍisuttihavu.
Matte gurumārgācāraviḍidu ācarisuva prasādigaḷige
avē vyādhigaḷu hitavāgihavu.
Matte sarpa kaccidaḍe, strīyu haḍeyalāradiddaḍe,
yāva kuladavanāgali vicārisade
avaru mantrisida udakava kuḍivudu.
Matte avara kulakke bhaktara kulakke hēsuvudu.An'yakulada vaidyana kaiyalli maddu māḍisikombaru.
Bhaktaru aḍugeya māḍidaḍe, yāva kulavembaru?
Avarige endendigū muktiyillavayyā.
Matte prasādava kombuvaru maddu kēḷalāgadu.
Adēnukāraṇavendaḍe-
prasādakkinta maddu hitavāyitalla!
Śivamantra kāyakke
an'yara kaiyalli mantrisi kēḷalāgadu.
Adēnu kāraṇavendaḍe -
śivamantrakkinta an'yara mantra adhikavāyittalla!
Matte vaidyakāraninda mantragāraninda
manuṣyara prāṇa uḷivudendu
yāva śāstra hēḷuttade?
Yāva āgama sāruttade? Hēḷiri.
Ariyadiddaḍe kēḷiri:
Bhaktagaṇaṅgaḷu pādōdaka prasādaVibhūti śivamantragaḷinde
lekkavillade hōha prāṇava paḍedaru -
endu basavēśvara purāṇadalli kūgyāḍuttade.
Intappa dr̥ṣṭava kaṇḍu nambadirdaḍe
āvina keccaloḷage uṇṇeyiddu
hālu biṭṭu raktava sēvisuvantāyittu endāta
nam'ma śāntakūḍalasaṅgamadēva