•  
  •  
  •  
  •  
Index   ವಚನ - 1673    Search  
 
ಶ್ರೀಗುರುವಿನ ಹಸ್ತದಲ್ಲಿ ಉಪದೇಶವ ಪಡೆದು ಭಕ್ತರಾದುದು ಮೊದಲಾಗಿ ನಿಮ್ಮ ಲಿಂಗವಾರೋಗಣೆಯ ಮಾಡಿದ ದಿನವುಂಟೆ? ಉಂಟಾದಡೆ ತೋರಿ, ಇಲ್ಲದಿರ್ದ್ದರೆ ನೀವು ಕೇಳಿ: ನಾನು ನಮ್ಮ ಗುರುವಿನ ಹಸ್ತದಲ್ಲಿ ಉಪದೇಶವಡೆದು ಭಕ್ತನಾದುದು ಮೊದಲಾಗಿ ನಮ್ಮ ಲಿಂಗವು ನಿರಂತರ ಆರೋಗಣೆಯ ಮಾಡಿ ಪ್ರಸಾದವ ಕರುಣಿಸುವುದು, ಅದು ಕಾರಣ ನಮಗೆ ಲಿಂಗವುಂಟು. ನಿಮ್ಮ ಲಿಂಗಕ್ಕೆ ಕರಚರಣ ಅವಯವಂಗಳಿಲ್ಲವಾಗಿ ನಿಮ್ಮ ಲಿಂಗವು ಸಕಲ ಭೋಗಂಗಳ ಭೋಗಿಸಲರಿಯದಾಗಿ ನಿಮಗೆ ಲಿಂಗವಿಲ್ಲ. ಪ್ರಸಾದವಿಲ್ಲವಾಗಿ ನಿಮಗೆ ಲಿಂಗವಿಲ್ಲವೆಂದೆನು. ಅದಕ್ಕೆ ನೀವು ಸಂಕೀರ್ಣಗೊಳ್ಳದಿರಿ. ಆ ವಿವರವನು ನಾನು ನಿಮಗೆ ಚೆನ್ನಾಗಿ ಕಾಣಿಸಿ ತೋರಿ ಹೇಳುವೆನು: ನಿಮ್ಮ ಶ್ರೀ ಗುರು ನಿಮಗೆ ಪ್ರಾಣಲಿಂಗ ಸಂಬಂಧವ ಮಾಡುವಲ್ಲಿ, ಆ ಲಿಂಗವೆ ಜಂಗಮದಂಗವು, ಆ ಜಂಗಮವ ಲಿಂಗದ ಪ್ರಾಣಚೈತನ್ಯದ ಕಳೆಯ ಮಾಡಿ ನಿಮ್ಮ ಶ್ರೀಗುರು ಕರಸ್ಥಲದಲ್ಲಿ ಆ ಲಿಂಗವ ಕೊಟ್ಟ ಕಾರಣ, ಇಂತಹ ಜಂಗಮ ಮುಖದಲ್ಲಿ ತ್ಯಪ್ತನಹೆನಲ್ಲದೆ ಲಿಂಗದ ಮುಖದಲ್ಲಿ ನಾನು ತೃಪ್ತನಹೆನೆಂದು ಹೇಳಿಕೊಟ್ಟನೆ? ಶ್ರೀಗುರು ಲಿಂಗವನು ಹಾಗೆ ಕೊಟ್ಟುದಿಲ್ಲವಾಗಿ. ಅದೆಂತೆಂದಡೆ, ಶಿವರಹಸ್ಯದಲ್ಲಿ ಶಿವನ ವಾಕ್ಯ: “ಸ್ಥಾವರಾರ್ಪಿತನೈವೇದ್ಯಾನ್ನ ಚ ತೃಪ್ತಿರ್ಮಹೇಶ್ವರಿ| ಜಂಗಮಾರ್ಪಿತನೈವೇದ್ಯಾದಹಂ ತುಷ್ಟೋ ವರಾನನೇ”|| ಎಂದುದಾಗಿ, ಇದಕ್ಕೆ ಉಪದೃಷ್ಟವಾಕ್ಯ: “ವೃಕ್ಷದ ಕೊನೆಗಳಿಗೆ ಉದಕವ ನೀಡಿದಡೆ ವೃಕ್ಷ ಪಲ್ಲವಿಸುವುದೆ? ಬೇರಿಂಗೆ ನೀಡಬೇಕಲ್ಲದೆ? ಅದೆಂತೆಂದಡೆ: “ವ್ಯಕ್ಷಸ್ಯ ವದನಂ ಭೂಮಿಃ ಸ್ಥಾವರಸ್ಯ ತು ಜಂಗಮಃ” ಅಂತು ವ್ಯಕ್ಷದ ಕೊನೆಯ ಸ್ಥಾನವೆ ಲಿಂಗವು, ಬೇರಿನ ಸ್ಥಾನವೆ ಜಂಗಮವು. ಮತ್ತೆಯೂ ದೃಷ್ಟ: ಗರ್ಭಿಣೀಸ್ತ್ರೀಗೆ ಉಣಲಿಕ್ಕಿದಡೆ ಆ ಗರ್ಭದೊಳಗಣ ಶಿಶು ತೃಪ್ತವಹುದಲ್ಲದೆ, ಆ ಸ್ತ್ರೀಯ ಗರ್ಭದ ಮೇಲೆ ಸಕಲಪದಾರ್ಥಂಗಳನಿಕ್ಕಿದಡೆ ಆ ಗರ್ಭದೊಳಗಣ ಶಿಶು ತೃಪ್ತವಾಗಬಲ್ಲುದೆ? ಅದು ಕಾರಣ- ಆ ಗರ್ಭದೊಳಗಣ ಶಿಶುವಿನ ಸ್ಥಾನವೆ ಲಿಂಗವು, ಆ ಗರ್ಭದ ಸ್ತ್ರೀಯ ಸ್ಥಾನವೆ ಜಂಗಮವು. ಅದಕ್ಕೆ ಮತ್ತೆಯೂ ದೃಷ್ಟ: ಪೃಥ್ವಿಗೆ ಚೈತನ್ಯವಾದಡೆ ಸಸಿಗಳು ಬೆಳೆವವಲ್ಲದೆ ಆ ಸಸಿಗಳ ಕೊನೆಯ ಮೇಲೆ ಮಳೆ ಸುರಿದಡೆ ಆ ಸಸಿಗಳು ಬೆಳೆಯಬಲ್ಲವೆ? ಬೆಳೆಯಲರಿಯವಾಗಿ. ಅಂತು ಆ ಸಸಿಯ ಕೊನೆಯ ಸ್ಥಾನವೆ ಲಿಂಗವು, ಆ ಪೃಥ್ವೀ ಸ್ಥಾನವೆ ಜಂಗಮವು. ಅದಕ್ಕೆ ಮತ್ತೆಯೂ ದೃಷ್ಟ: ದೇಹದ ಮೇಲೆ ಸಕಲ ಪದಾರ್ಥವ ತಂದಿರಿಸಿದಡೆ ಆತ್ಮನು ತೃಪ್ತನಾಗಬಲ್ಲನೆ, ಜಿಹ್ವೆಯ ಮುಖದಲ್ಲಿ ತೃಪ್ತನಹನಲ್ಲದೆ? ಅಂತು ದೇಹಸ್ಥಾನವೆ ಲಿಂಗವು; ಜಿಹ್ವೆಯ ಸ್ಥಾನವೆ ಜಂಗಮವು. ಇಂತೀ ನಾನಾ ದೃಷ್ಟಂಗಳಲ್ಲಿ ತೋರಿ ಹೇಳಿದ ತೆರನಲ್ಲಿ ನಿಮ್ಮ ಲಿಂಗವು ನಮ್ಮ ಜಂಗಮದ ಸರ್ವಾಂಗದಲ್ಲಿ ಹೊಂದಿಹ ಕಾಣಾ ಕೂಡಲಚೆನ್ನಸಂಗಮದೇವಾ.
Transliteration Śrīguruvina hastadalli upadēśava paḍedu bhaktarādudu modalāgi nim'ma liṅgavārōgaṇeya māḍida dinavuṇṭe? Uṇṭādaḍe tōri, illadirddare nīvu kēḷi: Nānu nam'ma guruvina hastadalli upadēśavaḍedu bhaktanādudu modalāgi nam'ma liṅgavu nirantara ārōgaṇeya māḍi prasādava karuṇisuvudu, adu kāraṇa namage liṅgavuṇṭu. Nim'ma liṅgakke karacaraṇa avayavaṅgaḷillavāgi nim'ma liṅgavu sakala bhōgaṅgaḷa bhōgisalariyadāgi nimage liṅgavilla. Prasādavillavāgi nimage liṅgavillavendenu. Adakke nīvu saṅkīrṇagoḷḷadiri. Ā vivaravanu nānu nimage cennāgi kāṇisi tōri hēḷuvenu: Nim'ma śrī guru nimage prāṇaliṅga sambandhava māḍuvalli, ā liṅgave jaṅgamadaṅgavu, ā jaṅgamava liṅgada prāṇacaitan'yada kaḷeya māḍi nim'ma śrīguru karasthaladalli ā liṅgava koṭṭa kāraṇa, intaha jaṅgama mukhadalli tyaptanahenallade liṅgada mukhadalli nānu tr̥ptanahenendu hēḷikoṭṭane? Śrīguru liṅgavanu hāge koṭṭudillavāgi. Adentendaḍe, śivarahasyadalli śivana vākya: Sthāvarārpitanaivēdyānna ca tr̥ptirmahēśvari| jaṅgamārpitanaivēdyādahaṁ tuṣṭō varānanē”|| endudāgi, idakke upadr̥ṣṭavākya: “Vr̥kṣada konegaḷige udakava nīḍidaḍe vr̥kṣa pallavisuvude? Bēriṅge nīḍabēkallade? Adentendaḍe: “Vyakṣasya vadanaṁ bhūmiḥ sthāvarasya tu jaṅgamaḥ” antu vyakṣada koneya sthānave liṅgavu, bērina sthānave jaṅgamavu. Matteyū dr̥ṣṭa: Garbhiṇīstrīge uṇalikkidaḍe ā garbhadoḷagaṇa śiśu tr̥ptavahudallade, ā strīya garbhada mēle sakalapadārthaṅgaḷanikkidaḍe Ā garbhadoḷagaṇa śiśu tr̥ptavāgaballude? Adu kāraṇa- ā garbhadoḷagaṇa śiśuvina sthānave liṅgavu, ā garbhada strīya sthānave jaṅgamavu. Adakke matteyū dr̥ṣṭa: Pr̥thvige caitan'yavādaḍe sasigaḷu beḷevavallade ā sasigaḷa koneya mēle maḷe suridaḍe ā sasigaḷu beḷeyaballave? Beḷeyalariyavāgi. Antu ā sasiya koneya sthānave liṅgavu, ā pr̥thvī sthānave jaṅgamavu. Adakke matteyū dr̥ṣṭa: Dēhada mēle sakala padārthava tandirisidaḍe ātmanu tr̥ptanāgaballane, jihveya mukhadalli tr̥ptanahanallade? Antu dēhasthānave liṅgavu; jihveya sthānave jaṅgamavu. Intī nānā dr̥ṣṭaṅgaḷalli tōri hēḷida teranalli nim'ma liṅgavu nam'ma jaṅgamada sarvāṅgadalli hondiha kāṇā kūḍalacennasaṅgamadēvā.