ಅಪ್ಪುಮಯದಿಂದಾದ ಶರೀರ ಹುಟ್ಟುವಲ್ಲಿ
ಅಪ್ಪು ಕೊಡನೊಡೆದು ಉತ್ಪತ್ಯವಾದುದು ಪಿಂಡದ ಭೇದ.
ಆ ಪಿಂಡ ನಷ್ಟವನೆಯ್ದುವಲ್ಲಿ ಉಂಗುಷ್ಟ ಮುಂತಾದ
ಅಡಿ ತೊಡೆಗಳಲ್ಲಿ
ಅಪ್ಪು ಆವರ್ಜಿಸಿ ಚೇತನ ನಷ್ಟವಾಗಿ,
ಇದು ದೃಷ್ಟ ಪಿಂಡದಿ ಮರಣ.
ಈ ಉಭಯದ ಜನನ ಮರಣವ ತಾನರಿತು,
ಜಗದಂತೆ ಹುಟ್ಟದೆ ಜಗದಂತೆ ಹೊಂದದೆ,
ಶ್ರೀಗುರುವಿನ ಕರಕಮಲದಲ್ಲಿ ಅಂತಃಕರಣ ಆನಂದ
ಅಶ್ರುಜಲ ಉಣ್ಮಿ,
ಹುಟ್ಟಿದ ಪಿಂಡ ಗುರು ಕರಜಾತ.
ಇಂತಪ್ಪ ಲಿಂಗಮೂರ್ತಿ ಧ್ಯಾನದಿಂದ ಬೆಳೆದು,
ತ್ರಿವಿಧ ಪ್ರಸಾದವ ಸ್ವೀಕರಿಸಿ
ಸರ್ವಜ್ಞಾನ ಸಂಪನ್ನನಾಗಿ ಪಿಂಡದ ಅಳಿವನರಿವಲ್ಲಿ
ಸಂಚಿತದ ಸುಖ, ಪ್ರಾರಬ್ಧದ ಶಂಕೆ, ಆಗಾಮಿಯ ಆಗು
ಇಂತೀ ತ್ರಿವಿಧ ಭೇದವ ಕಂಡು
ತ್ರಿವಿಧ ಮಲಕ್ಕೆ ಮನವನಿಕ್ಕದೆ ಇವು ಮುನ್ನ ತನ್ನವಲ್ಲ,
ಇನ್ನು ನನ್ನವಲ್ಲ ಎಂಬುದ ತಿಳಿದು,
ಸತಿ-ಸುತ-ಪಿತ-ಜನನಿ-ಬಂಧು ಮುಂತಾದ ವರ್ಗಂಗಳನರಿತು,
ಇವು ತಾವು ಬಟ್ಟೆಯೆಂಬುದು ತಿಳಿದು ಲೌಕಿಕಕ್ಕೆ ಮನವಿಕ್ಕದೆ,
ಆತ್ಮಂಗೆ ಉಚಿತ ವೇಳೆ ಬಂದಲ್ಲಿ
ಗುರುವಿನಲ್ಲಿ ವಿಶ್ವಾಸ, ಲಿಂಗದಲ್ಲಿ ಮೂರ್ತಿಧ್ಯಾನ,
ಜಂಗಮದಲ್ಲಿ ಪ್ರಸನ್ನ ಪ್ರಸಾದವ ಕೈಕೊಂಡು,
ಹುಸಿಯ ಮೃತ್ತಿಕೆಯಲ್ಲಿ ಸರಳು ಸುರಿದಂತೆ,
ತನ್ನ ಇಷ್ಟದಲ್ಲಿ ಚಿತ್ತ ಹೊರೆಯಿಲ್ಲದೆ ಹರಿದು,
ಎರವಿಲ್ಲದೆ ಕೂಡಿ ಬೆರೆದುದೆ ಸಾವಧಾನಿಯ ಸಂಬಂಧ.
ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ,
ಮಾತುಳಂಗ ಮಧುಕೇಶ್ವರನು.
Art
Manuscript
Music
Courtesy:
Transliteration
Appumayadindāda śarīra huṭṭuvalli
appu koḍanoḍedu utpatyavādudu piṇḍada bhēda.
Ā piṇḍa naṣṭavaneyduvalli uṅguṣṭa muntāda
aḍi toḍegaḷalli
appu āvarjisi cētana naṣṭavāgi,
idu dr̥ṣṭa piṇḍadi maraṇa.
Ī ubhayada janana maraṇava tānaritu,
jagadante huṭṭade jagadante hondade,
śrīguruvina karakamaladalli antaḥkaraṇa ānanda
aśrujala uṇmi,
huṭṭida piṇḍa guru karajāta.
Intappa liṅgamūrti dhyānadinda beḷedu,
trividha prasādava svīkarisi
Sarvajñāna sampannanāgi piṇḍada aḷivanarivalli
san̄citada sukha, prārabdhada śaṅke, āgāmiya āgu
intī trividha bhēdava kaṇḍu
trividha malakke manavanikkade ivu munna tannavalla,
innu nannavalla embuda tiḷidu,
sati-suta-pita-janani-bandhu muntāda vargaṅgaḷanaritu,
ivu tāvu baṭṭeyembudu tiḷidu laukikakke manavikkade,
ātmaṅge ucita vēḷe bandalli
guruvinalli viśvāsa, liṅgadalli mūrtidhyāna,
Jaṅgamadalli prasanna prasādava kaikoṇḍu,
husiya mr̥ttikeyalli saraḷu suridante,
tanna iṣṭadalli citta horeyillade haridu,
eravillade kūḍi beredude sāvadhāniya sambandha.
Śambhuvininditta svayambhuvinindatta atibaḷa nōḍā,
mātuḷaṅga madhukēśvaranu.