Index   ವಚನ - 68    Search  
 
ಭಕ್ತಸ್ಥಲವ ತಾಳ್ದ ಮತ್ತೆ ತ್ರಿವಿಧದಲ್ಲಿ ಆವ ಸೋಂಕು ಬಂದಡೂ ಗುರುಚರಪರದಲ್ಲಿ ಶ್ರುತದಿಂದ ಕೇಳಿ ದೃಷ್ಟದಿಂದ ಕಂಡು, ಅನುಮಾನದಿಂದ ವಿಚಾರಿಸಿಕೊಂಡರಿದಡೂ ವೃಶ್ಚಿಕದಿಂದ ನೊಂದ ಚೋರನಂತೆ ಬಾಯಿ ಮುಚ್ಚಿದಂತಿರಬೇಕು. ಮಾಹೇಶ್ವರಸ್ಥಲವ ತಾಳ್ದಲ್ಲಿ ಆವ ವ್ರತಹಿಡಿದಡೂ ತಪ್ಪಿದವರ ಕಂಡಲ್ಲಿ, ಗುರುಲಿಂಗಜಂಗಮದ ನಿಂದೆಯ ಕೇಳಿ ಕಂಡಲ್ಲಿ, ತನ್ನ ಅನುವಿಂಗೆ ಬಾರದೆ ಆಚಾರಕ್ಕೆ ಓಸರಿಸಿದವರ ಕಂಡಲ್ಲಿ, ತನ್ನ ಸ್ಥಲಕ್ಕೆ ಊಣೆಯವೆಂದು ಕೇಳಿದಲ್ಲಿ ಕೇಳಿದ ತೆರನ ತನ್ನ ತಾನರಿದಲ್ಲಿ, ಇದಿರಿಗೆ ಆಜ್ಞೆ ತನಗೆ ಸಾವಧಾನ ಕಡೆಯೆಂಬುದನರಿತುದು ವಿಶ್ವಲಿಂಗ ಮಾಹೇಶ್ವರಸ್ಥಲ. ಪ್ರಸಾದಿಸ್ಥಲವ ತಾಳ್ದಲ್ಲಿ, ಶುದ್ಧವೆನ್ನದೆ ಸಿದ್ಧವೆನ್ನದೆ ಪ್ರಸಿದ್ಧವೆನ್ನದೆ ಉಚಿತದಲ್ಲಿ ಚಿಕಿತ್ಸೆ ಜುಗುಪ್ಸೆಯೆನ್ನದೆ ಕಾಲರುದ್ರನಂತೆ ದಾವಾನಳನಂತೆ ಪೂರ್ಣಚಂದ್ರ ಮಹಾರ್ಣಸಿಂಧುವಿನ ತೆರದಂತೆ ನೂತನ ಇನನ ಹೋದ ಕಳೆಯಂತೆ ಬಂದುದ ನಿಂದುದ ಬಹುದ ಸಂದಿತ್ತು. ಸಾಕುಬೇಕೆನ್ನದೆ ಕರುಣದಿಂದ ಬಂದಡೆ ಕರುಣದಿಂದ ಸಾಕೆಂದು ನಿಂದಡೆ, ಪ್ರಸಾದವ ಕೊಂಡಲ್ಲಿ ಉಕ್ಕಳ ಉಬ್ಬಸ ತಬ್ಬಿಬ್ಬು ಹೋಗಿ ವೃದ್ಧಿಗೆ ಎಡೆಯಿಲ್ಲದೆ, ಭಾಗೀರಥಿಯಂತೆ ತುಂಬಿತ್ತೆಂದು ಸೂಸದೆ ಇಲ್ಲಾ ಎಂದು ಹಿಂಗದೆ ಎಂದಿನಂತೆ ತುಂಬಿದಂತೆ ಇಪ್ಪ ನಿಜಪ್ರಸಾದಿಯ ನಿಜದಂಗಸ್ಥಲ. ಪ್ರಾಣಲಿಂಗಿಸ್ಥಲವ ತಾಳ್ದಲ್ಲಿ, ಬಿತ್ತುಳಿದ ಕಾರ್ಪಾಸದ ಹಿಕ್ಕಿದ ಮಧ್ಯದಲ್ಲಿ ಕಿಚ್ಚು ಮುಟ್ಟದಂತೆ ಪೃಥ್ವಿಯ ಪಿಪೀಲಿಕ ಮೃತ್ತಿಕೆಯ ಮುಟ್ಟಲಿಕ್ಕಾಗಿ, ಅಪ್ಪು ಒಡಗೂಡಿಯೆ ತಿಟ್ಟ ನಿಂದಂತೆ, ಕರ್ಪೂರದ ವೃಕ್ಷಕ್ಕೆ ಬುಡದಿಂದ ಕಿಚ್ಚು ಹತ್ತಿದಂತೆ, ಮಧುಮಕ್ಷಿಕದ ಚಿತ್ತವಿದ್ದಂತೆ, ಆಯುಃಕಾಂತ ಲೋಹಕ್ಕೆ ಆತ್ಮಭಾವವಿದ್ದಂತೆ, ಕೂರ್ಮನ ಶಿಶುವಿನ ಸ್ನೇಹವಿದ್ದಂತೆ, ಈ ಗುಣ ಸದ್ಭಾವದಲ್ಲಿ ಪ್ರಾಣಲಿಂಗಿಸ್ಥಲ. ಶರಣಸ್ಥಲವ ತಾಳ್ದಲ್ಲಿ, ಮದಗಜದಂತೆ ಬಿದಿರಿನ ಪಟುಭಟನಂತೆ ಮಸಗಿದ ಮಾರುತನಂತೆ ಘನಸಿಂಧು ಎಸಗಿದ ಉದ್ಭವದಂತೆ ಕಾಲಸಂಹಾರ ಲೀಲೆಯಾದಂತೆ ತಾನಿದಿರೆಂಬ ಭಾವವ ಮರೆದು ನಿಶ್ಚಲ ನಿಜವಾದುದು ಶರಣಸ್ಥಲ. ಐಕ್ಯಸ್ಥಲವ ತಾಳ್ದಲ್ಲಿ, ಶಕ್ತಿಯಲ್ಲಿ ನಿಂದ ಅಪ್ಪುವಿನಂತೆ, ಬಿಂದುವನೊಳಕೊಂಡ ರಜ್ಜುವಿನಂತೆ ರಜ್ಜುವನೊಳಕೊಂಡ ಋತುಕಾಲದ ಸುರಂಗದ ನಿರಂಗದಂತೆ. ಸುಗಂಧವ ಕೊಂಡೊಯ್ದ ಸಂಚಾರ ಹೋಗ ಹೋಗಲಿಕ್ಕಾಗಿ ಸುಗಂಧದಂಗವಡಗಿದಂತೆ ವಿದ್ಯುಲ್ಲತೆಯ ಕುಡಿವೆಳಗಿನಂತೆ ನಿರವಯದ ಗರ್ಜನೆಯಂತೆ, ವಿಷರುಹದ ಭದ್ರದ ಸುವರ್ಣದ ನಿರ್ಧರದ ನಿರವಯದಂತೆ, ಅಂಬುಧಿಯೊಳಗಡಗಿದ ಸೂಕ್ಷ್ಮ ಸಮಸಂಗದ ಘಟದಂತೆ, ಮಂಜಿನಪದ ಬಿಸಿಲಂಗದ ನಾಮದಲ್ಲಿ ಇಂಗಿ ಹೋದಂತೆ, ಈ ನಿರಂಗ ನಿಶ್ಚಯವಾದಲ್ಲಿ ಐಕ್ಯಸ್ಥಲ. ಇಂತೀ ಆರುಸ್ಥಲವನರಿದು ಮೂರುಸ್ಥಲದಲ್ಲಿ ನಿಂದು, ಉಭಯಸ್ಥಲ ಕೂಡಿ ಎರಡಳಿದ ಉಳುಮೆ ಪರಿಪೂರ್ಣವಸ್ತು ಬಂಧಮೋಕ್ಷ ಕರ್ಮಂಗಳಿಂದತ್ತ ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು. || 68 ||