Index   ವಚನ - 167    Search  
 
ಗುರುಲಿಂಗಜಂಗಮವನು ಭಿನ್ನವಿಟ್ಟರಿದರೆ ಶ್ರದ್ಧೆ ನಾಚಿ ಭಕ್ತತ್ವವ ನುಂಗಿ ಬಯಲಾಯಿತ್ತು. ಪಂಚಾಕ್ಷರಿಯ ಭೀನ್ನವಿಟ್ಟರಿದರೆ ನಿಷ್ಠೆ ನಾಚಿ ಮಹೇಶ್ವರತ್ವವ ನುಂಗಿ ಬಯಲಾಯಿತ್ತು. ಪ್ರಸಾದವ ಭಿನ್ನವಿಟ್ಟರಿದರೆ ಸಾವಧಾನ ನಾಚಿ ಪ್ರಸಾದಿಸ್ವರೂಪವ ನುಂಗಿ ಬಯಲಾಯಿತ್ತು. ರುದ್ರಾಕ್ಷಿಯ ಭಿನ್ನವಿಟ್ಟರಿದರೆ ಅನುಭಾವ ನಾಚಿ ಪ್ರಾಣಲಿಂಗಿಸ್ವರೂಪವ ನುಂಗಿ ಬಯಲಾಯಿತ್ತು. ಪಾದೋದಕ ಭಿನ್ನವಿಟ್ಟರಿದರೆ ಆನಂದಭಕ್ತಿ ನಾಚಿ ಶರಣತ್ವವ ನುಂಗಿ ಬಯಲಾಯಿತ್ತು. ಶ್ರೀ ವಿಭೂತಿಯ ಭಿನ್ನವಿಟ್ಟರಿದರೆ ಸಮರಸ ನಾಚಿ ಐಕ್ಯತ್ವವ ನುಂಗಿ ಬಯಲಾಯಿತ್ತು. ಇಂತು ಅಷ್ಟಾವರಣ ಭಿನ್ನವಿಟ್ಟು ಷಟ್‍ಸ್ಥಲಬ್ರಹ್ಮಿಯಾದೆನೆಂದರೆ ಫಲಪದದತ್ತ ನಿಜಪದವರಿಯಬಾರದು ಗುರುನಿರಂಜನ ಚನ್ನಬಸವಲಿಂಗ ಸಾಕ್ಷಿತನು.