ಆರುಬಣ್ಣದ ಸೀರೆಯನುಟ್ಟು ಭೂಪಾಲನ ಮಡದಿ,
ತನ್ನ ಕೈಯಲ್ಲಿ ಆರುರತ್ನವ ಹಿಡಿದಿರ್ದಳು ನೋಡಾ!
ಒಂದೊಂದು ರತ್ನವ ತೋರುವಲ್ಲಿ
ಒಂದೊಂದು ಸೋಗ ತಾಳಿದಳು ನೋಡಾ!
ಅವಳು ನಟನೆಯ ಮಾಡುವಲ್ಲಿ
ಪರಪುರುಷರ ಮೇಲೆ ಮೋಹ ನೋಡಾ!
ಮನೆಗಂಡನುಪಚಾರವನುಳಿದು ಪರಪುರುಷರ ಮೆಚ್ಚಿ ಬಿಡದೆ
ಅಚ್ಚೊತ್ತಿದಂತಿರ್ದಡೆ ಅರಿದವರು ನಗುವರು.
ಲೌಕಿಕರು ತಲೆತಗ್ಗಿಸಿ ನಾಚುವರು,
ನಮ್ಮ ಗುರುನಿರಂಜನ ಚನ್ನಬಸವಲಿಂಗ
ನೋಡಿ ಅಪ್ಪಿಕೊಂಡನು.