ಗುರುಲಿಂಗವ ಪಡೆವರೆಂದು
ನರರು ದುರ್ವರ್ತನೆಯೊಳಿರಲು ಅರೆಭಕ್ತರೆನಿಸುವರು,
ಅನಾದಿಭಕ್ತನಾಗಿ ಆದಿಗುರುವಿನ ಕೈಯಿಂದೆ
ಆದಿ ಅನಾದಿಯಿಂದತ್ತತ್ತಲಾದ ಮೂದೇವರರಿಯದ
ನಿರಂಜನಲಿಂಗವ ಸಾಧಿಸಿ ಕರಸ್ಥಲಕ್ಕೆ ತಂದು,
ತ್ರಿವಿಧಾಚರಣೆವಿಡಿದಾಚರಿಸುವಲ್ಲಿ
ಅರೆಭಕ್ತರಿಗೆ ಆಪ್ತರೆಂದರೆ ಸಂಧಿಸಿತು ಕರ್ಮತ್ರಯ.
ಅವರಿಗೆ ಶರಣೆಂದರೆ ಕುರುಹುಗೊಂಡಿತ್ತು ಲಯಗಮನ.
ಅವರಿಗೆ ಶಿವನೆಂದು ಭಕ್ತಿಯ ಮಾಡಿ ನೀಡಿದರೆ
ಸೈದಾನದ ಕೇಡು ದುಃಖದ ಬೀಡು.
ಅವರಲ್ಲಿ ಪಾದೋದಕ ಪ್ರಸಾದ ಕೊಡಕೊಳ್ಳಿಯಾದರೆ
ಪಂಚಮಹಾಪಾತಕ ಘಟಿಸುವದು.
ಅವರಿಗೆ ಶಿವಾನುಭಾವವನಿತ್ತಡೆ ಬ್ರಹ್ಮಹತ್ಯವೆಡೆಗೊಡುವದು.
ಅದೇನುಕಾರಣವೆಂದೊಡೆ,
ಅವರು ಆದ್ಯರು ವೇದ್ಯರು ಸಾಧ್ಯರು ಆಚರಿಸಿದ ಆಚರಣೆಗೆ ಕೂಡಿ
ದುರ್ನಡೆಯಲ್ಲಿ ಬಿದ್ದು ದೂರಿಕೊಂಬವರಾಗಿ.
ಅವರ ಕೂಡೆ ಸಕಲವ ಬಿಟ್ಟು ಮತ್ತೊಂದು ವೇಳೆ ಬೇಕಾದರೆ,
ಲೌಕಿಕರ ಭಕ್ತಿ ಅವರ ಸ್ನೇಹ ಅವರ ಸೇವೆಯು ಅವರು ಮಾಡಿದ ಪೂಜೆ
ಅವರಿಂದೆ ಸಕಲವನು ಶುದ್ಧಮಾಡಿಕೊಂಡು ಸುಖಿಸುವದು
ಗುರುನಿರಂಜನ ಚನ್ನಬಸವಲಿಂಗಸನ್ನಿಹಿತವಾಗಿ.