Index   ವಚನ - 483    Search  
 
ಆಧಾರಚಕ್ರದಲ್ಲಿ ಅವಿರಳಪ್ರಕಾಶವನು ತೋರಿ ಬೀರಲಿಲ್ಲದ ಲಿಂಗವ ಆಚಾರಮುಖದಲೈದಿ ಕಂಡು ಸುಖಿಸಬಲ್ಲರೆ ಪ್ರಾಣಲಿಂಗಿ. ಸ್ವಾಧಿಷ್ಠಾನಚಕ್ರದಲ್ಲಿ ಬಹುಪ್ರಕಾಶವನು ತೋರಿ ಬೀರಲಿಲ್ಲದ ಲಿಂಗವ ಮಂತ್ರಮುಖದಲೈದಿ ಕಂಡು ಸುಖಿಸಬಲ್ಲರೆ ಪ್ರಾಣಲಿಂಗಿ. ಮಣಿಪೂರಕಚಕ್ರದಲ್ಲಿ ಅಗಣಿತಮಯಪ್ರಕಾಶವನು ಕಾಣಿಸಿಕೊಳ್ಳದ ಲಿಂಗವ ನಿರೀಕ್ಷಣೆಮುಖದಲೈದಿ ಕಂಡು ಪರಿಣಾಮಿಸಬಲ್ಲರೆ ಪ್ರಾಣಲಿಂಗಿ. ಅನಾಹತಚಕ್ರದಲ್ಲಿ ಅಚ್ಚಪ್ರಕಾಶವ ತೋರಿ ತೋರದ ಲಿಂಗವ ಅಜನಮುಖದಲೈದಿ ಕಂಡು ಆನಂದಮಯನಾಗಬಲ್ಲರೆ ಪ್ರಾಣಲಿಂಗಿ. ವಿಶುದ್ಧಿಚಕ್ರದಲ್ಲಿ ಘನಪ್ರಕಾಶವನು ತೋರಿ ನಿಲುಕದ ಲಿಂಗವ ಅಂತಸ್ತೌತ್ಯಮುಖದಲೈದಿ ಕಂಡು ಪರಿಣಾಮಿಸಬಲ್ಲರೆ ಪ್ರಾಣಲಿಂಗಿ. ಆಜ್ಞಾಚಕ್ರದಲ್ಲಿ ಮಹಾಘನಪ್ರಕಾಶವನು ತೋರಿ ಆರಿಸದ ಲಿಂಗವ ಆನಂದಮುಖದಲೈದಿ ಕಂಡು ಹೆಚ್ಚಬಲ್ಲರೆ ಪ್ರಾಣಲಿಂಗಿ. ಬ್ರಹ್ಮಚಕ್ರದಲ್ಲಿ ಅನಂತಪ್ರಕಾಶವ ತೋರಿ ತೋರದ ಲಿಂಗವ ಪರಿಪೂರ್ಣಮುಖದಲೈದಿ ಕಂಡು ಆನಂದಿಸಬಲ್ಲರೆ ಪ್ರಾಣಲಿಂಗಿ. ಶಿಖಾಚಕ್ರದಲ್ಲಿ ಅಖಂಡಪ್ರಕಾಶವನು ತೋರಿ ಕಾಣಿಸದ ಲಿಂಗವ ಅರುವಿನಮುಖದಲೈದಿ ಕಂಡು ಸುಖಮಯನಾಗಬಲ್ಲರೆ ಪ್ರಾಣಲಿಂಗಿ. ಪಶ್ಚಿಮಚಕ್ರದಲ್ಲಿ ಅಖಂಡ ಮಹಾಪ್ರಕಾಶವನು ತೋರಿ ಮೀರಿದ ಲಿಂಗವ ಮಹದರುವಿನಮುಖದಲೈದಿ ಕಂಡು ಆಹ್ಲಾದಿಸಿಕೊಳಬಲ್ಲರೆ ಪ್ರಾಣಲಿಂಗಿ. ಇಂತು ನವಚಕ್ರದಲ್ಲಿ ನವಪ್ರಕಾಶವಾಗಿ ತೋರಿ ಮೀರುವ ಅಪ್ರತಿಮಲಿಂಗವ ಸದ್ಗುರುವಿನ ಮುಖದಲಿ ಕರಸ್ಥಲಕ್ಕೈದಿಸಿ ಕಂಡು ವಿನೋದಮಯನಾಗಬಲ್ಲರೆ ಪ್ರಾಣಲಿಂಗಿ ಗುರುನಿರಂಜನ ಚನ್ನಬಸವಲಿಂಗದಲ್ಲಿ.