Index   ವಚನ - 492    Search  
 
ಸಕಲಸನ್ನಿಹಿತವಾಗಿ ಹೇಮಾದ್ರಿಯನೇರಿ ನಿನ್ನನರಸಿ ಕಂಡಿಹೆನೆಂದಡೆ ಬ್ರಹ್ಮನ ಬೆಳಗ ತೋರಿ ಕಡೆಸಾರಿದೆಯಯ್ಯಾ! ಸಕಲಸಂಭ್ರಮದಿಂದೆ ರಜತಾದ್ರಿಯನೇರಿ ನಿನ್ನನರಸಿ ಕಂಡಿಹೆನೆಂದಡೆ ವಿಷ್ಣುವಿನ ಬೆಳಗ ತೋರಿ ಕಡೆಗೆ ಸಾರಿದೆಯಯ್ಯಾ! ಸಕಲಸಂಪತ್ತಿನಿಂದೆ ಮಂದರಾದ್ರಿಯನೇರಿ ನಿನ್ನನರಸಿ ಕಂಡಿಹೆನೆಂದರೆ ರುದ್ರನ ಬೆಳಗ ತೋರಿ ಕಡೆಸಾರಿದೆಯಯ್ಯಾ! ಕಾಳಬೆಳಗಿನ ಕಾರಣದ ಹಿರಿಯರಿಗೆ ಬಂದುಂಡು ಹೋಗುವ ಬಟ್ಟೆಯ ತೋರಿ ಕಡೆಸಾರಿದೆಯಯ್ಯಾ. ಮತ್ತೆ ನಿನ್ನ ಕಾಂಬುವ ಬಗೆ ಯಾವುದೆಂದೊಡೆ ಕಡೆಗೆ ನಿಂದು ಕೊಡಹಿ ಬೆಡಗಿನಿಂದೆ ಬಂದವನ ಕೂಡಿ ನೋಡಿದಲ್ಲಿ ಗುರುನಿರಂಜನ ಚನ್ನಬಸವಲಿಂಗದ ಬೆಳಗು ಬೇರಿಲ್ಲ.