Index   ವಚನ - 556    Search  
 
ವಲ್ಲಭನ ಒಲುಮೆಯ ವನಿತೆಯರು ಬನ್ನಿರವ್ವ, ಸಲುಗೆಯ ಮಾತಿನ ಸವಿಯ ಕೇಳಿರವ್ವ. ಬೆಚ್ಚಿ ಬೆರಗಾಗಿ ಹೇಳದಿರಿರವ್ವ. ಲಕ್ಷಪತಿ ಏನು ಕಾರಣ ಬಂದಿರ್ದನವ್ವ? ನಲ್ಲನ ಹಾವುಗೆಯಬೆಳಗು ಭುವನಾದಿ ಆಕಾಶಕ್ಕೆ ಮುಸುಕಿತ್ತು. ಮುಕುಟದ ಬೆಳಗು ಸಪ್ತದ್ವೀಪ ಸಮುದ್ರಂಗಳನೆಲ್ಲ ಮುಸುಕಿತ್ತು. ಹೇಮ ರಜತ ಮಂದರಾದ್ರಿಗಳ ಸುತ್ತಮುತ್ತಲಿರುವ ಮನು ಮುನಿ ದೇವತೆಗಳಾದಿ ಸಕಲಸಂದೋಹವೆಲ್ಲ ಬೆಳಗಿನೊಳು ನಿಂದು. ಹರಹರ ಶಿವಶಿವ ಜಯಜಯವೆನಲಾನು ಉಬ್ಬಿ ಕೊಬ್ಬಿ ಶರಣೆನ್ನಲಾರದೆ ಕೂಡಿ ನೆರೆಯಲು, ಅರಿಯದ ಸುಖವ ಕಂಡು ಮರೆದಿರ್ದೆ ಕಾಣಿರವ್ವ ಗುರುನಿರಂಜನ ಚನ್ನಬಸವಲಿಂಗದಲ್ಲಿ.