Index   ವಚನ - 583    Search  
 
ನೋಟಲಂಪಟರಿಗೆ ಸ್ತ್ರೀಯರ ರೂಪವಲ್ಲದೆ ಶರಣಸ್ವರೂಪವೆಲ್ಲಿಹದೊ? ನಡೆಲಂಪಟರಿಗೆ ದುರಾಚಾರವಲ್ಲದೆ ಶರಣನ ಸದಾಚಾರವೆಲ್ಲಿಹದೊ? ಜಿಹ್ವೆಲಂಪಟರಿಗೆ ಕೂಳೇ ಪ್ರಾಣವಲ್ಲದೆ ಶರಣನುಡಿರಸವೆಲ್ಲಿಹದೊ? ಗುಹ್ಯಲಂಪಟರಿಗೆ ಯೋನಿಮೋಹವಲ್ಲದೆ ಶರಣಮೋಹವೆಲ್ಲಿಹದೊ? ಶಬ್ದಲಂಪಟರಿಗೆ ದುರ್ಗೋಷ್ಠಿಗೆ ರತಿಯಲ್ಲದೆ ಶರಣರನುಭಾವಕ್ಕೆ ರತಿಯೆಲ್ಲಿಹದೊ? ವಾಕ್ಪಟುಗಳಿಗೆ ಬರಿಗರ್ಜನೆಯಲ್ಲದೆ ಶರಣನೆನಹೆಲ್ಲಿಹದೊ? ವಾಸನೆಯಲಂಪಟರಿಗೆ ಮಲತ್ರಯವಾಸನೆಯಲ್ಲದೆ ಶರಣಸತಿ ಲಿಂಗಪತಿವಾಸನೆಯೆಲ್ಲಿಹದೊ? ಸ್ಪರ್ಶನಲಂಪಟರಿಗೆ ಸ್ತ್ರೀಯಪ್ಪುಗೆಯಲ್ಲದೆ ಶರಣರಪ್ಪುಗೆಯೆಲ್ಲಿಹದೊ? ಹಸ್ತಲಂಪಟರಿಗೆ ಕುಚ ಹೇಮಾಸೆಯಲ್ಲದೆ ಶರಣಸೇವೆಯೆಲ್ಲಿಹದೊ? ಮನಲಂಪಟರಿಗೆ ಸಂಕಲ್ಪವಿಕಲ್ಪವಲ್ಲದೆ ಶರಣಲಿಂಗ ಒಂದೆಂಬ ಭಾವವೆಲ್ಲಿಹದೊ? ಪ್ರಾಣಲಂಪಟರಿಗೆ ಮಾಯಾಮೋಹ ವಿಷಯಹಂಭಾವವಲ್ಲದೆ ಶಿವೋಹಂಭಾವವೆಲ್ಲಿಹದೊ? ಇಂತು ಈ ಪ್ರಾಣಿಗಳಿಗೆ ಶರಣರೆನ್ನಬಹುದೆ? ಗುರುನಿರಂಜನ ಚನ್ನಬಸವಲಿಂಗ ಸಾಕ್ಷಿಯಾಗಿ, ಭವಸಂಬಂಧಿಗಳಿಗೆ ಲಿಂಗಸಂಬಂಧಿಯೆನ್ನಬಾರದು ಕಾಣಾ.