Index   ವಚನ - 622    Search  
 
ಪೃಥ್ವಿಯಂಗದಲ್ಲಿ ಆಚಾರಲಿಂಗವೆಂಬ ಪತಿಗೆ ಶ್ರದ್ಧೆಯುಕ್ತಸತಿಯಾಗಿ ಸುಖಿಸಬಲ್ಲರೆ ಶರಣನೆಂಬೆ. ಅಪ್ಪು ಅಂಗದಲ್ಲಿ ಗುರುಲಿಂಗವೆಂಬ ಪತಿಗೆ ನೈಷ್ಠೆಯುಕ್ತಸತಿಯಾಗಿ ಮೋಹಿಸಬಲ್ಲರೆ ಶರಣನೆಂಬೆ. ಅಗ್ನಿಯಂಗದಲ್ಲಿ ಶಿವಲಿಂಗವೆಂಬ ಪತಿಗೆ ಸಾವಧಾನಯುಕ್ತಸತಿಯಾಗಿ ರಮಿಸಬಲ್ಲರೆ ಶರಣನೆಂಬೆ. ವಾಯುವಂಗದಲ್ಲಿ ಜಂಗಮಲಿಂಗವೆಂಬ ಪತಿಗೆ ಅನುಭಾವಯುಕ್ತಸತಿಯಾಗಿ ಸಂಗತಿಯಬಲ್ಲರೆ ಶರಣನೆಂಬೆ. ಆಕಾಶಾಂಗದಲ್ಲಿ ಪ್ರಸಾದಲಿಂಗವೆಂಬ ಪತಿಗೆ ಆನಂದಯುಕ್ತಸತಿಯಾಗಿ ಪರಿಣಾಮಿಸಬಲ್ಲರೆ ಶರಣನೆಂಬೆ. ಆತ್ಮಾಂಗದಲ್ಲಿ ಮಹಾಲಿಂಗವೆಂಬ ಪತಿಗೆ ಸಮರಸಯುಕ್ತಸತಿಯಾಗಿ ಪರಿಣಾಮಿಸಬಲ್ಲರೆ ಶರಣನೆಂಬೆ. ಅಭಿನ್ನಯುಕ್ತಸತಿಯಾಗಿ ಆನಂದಮಯನಾಗಬಲ್ಲರೆ ಅಚ್ಚಶರಣನೆಂಬೆ ಕಾಣಾ.