Index   ವಚನ - 904    Search  
 
ಅಲುಪ್ತ ಶಕ್ತಿತ್ವಾನುಭಾವಪ್ರಕಾಶದೊಳ್ಮುಳುಗಿ ಆಚಾರಲಿಂಗಭಕ್ತನೆಂಬ ನಾಮನಷ್ಟವಾಯಿತ್ತು ನೋಡಾ! ಸ್ವತಂತ್ರ[ಶಕ್ತಿ]ತ್ವಾನುಭಾವಪ್ರಕಾಶದೊಳ್ಮುಳುಗಿ ಗುರುಲಿಂಗಮಹೇಶನೆಂಬ ನಾಮನಷ್ಟವಾಯಿತ್ತು ನೋಡಾ. ನಿತ್ಯ[ಶಕ್ತಿ]ತ್ವಾನುಭಾವಪ್ರಕಾಶದೊಳ್ಮುಳುಗಿ ಶಿವಲಿಂಗಪ್ರಸಾದಿಯೆಂಬ ನಾಮನಷ್ಟವಾಯಿತ್ತು ನೋಡಾ. ಅನಾದಿ ಬೋಧ[ಶಕ್ತಿ]ತ್ವಾನುಭಾವಪ್ರಕಾಶದೊಳ್ಮುಳುಗಿ ಜಂಗಮಲಿಂಗ ಪ್ರಾಣಲಿಂಗಿಯೆಂಬ ನಾಮನಷ್ಟವಾಯಿತ್ತು ನೋಡಾ. ಸರ್ವಜ್ಞ[ಶಕ್ತಿ]ತ್ವಾನುಭಾವಪ್ರಕಾಶದೊಳ್ಮುಳುಗಿ ಪ್ರಸಾದಲಿಂಗಶರಣನೆಂಬ ನಾಮನಷ್ಟವಾಯಿತ್ತು ನೋಡಾ. ತೃಪ್ತ[ಶಕ್ತಿ]ತ್ವಾನುಭಾವಪ್ರಕಾಶದೊಳ್ಮುಳುಗಿ ಮಹಾಲಿಂಗೈಕ್ಯನೆಂಬ ನಾಮವನುಡುಗಿ ಗುರುನಿರಂಜನ ಚನ್ನಬಸವಲಿಂಗಾ ನಿಮ್ಮೊಳಗೆ ನಿಜೈಕ್ಯನಾದೆನು ಕಾಣಾ.