Index   ವಚನ - 917    Search  
 
ಗಂಡನ ಸುಖಬಲ್ಲ ಮಿಂಡೆಯರೆಲ್ಲ ಬನ್ನಿರೆ. ತಂಡ ತಂಡದ ಭೋಗವನಾ ಮಂಡಲದ ಮಾನಿನಿಯರೇನು ಬಲ್ಲರು ಕಾಣಿರೆ! ಸುಚಿತ್ತಾಲಯದಲ್ಲಿ ಬಹಿರಚತುಷ್ಟಿಕಳಾಯುಕ್ತದಿಂ ನೆರೆವ ವತ್ತರ ಒಲುಮೆಯ ರತಿಯೊಳ್ಮುಳುಗಿದ ಸೊಬಗಿನ ಸೊನ್ನೆಯನೇನೆಂಬೆನವ್ವ! ಸುಬುದ್ಧಿ ನಿಲಯದಲ್ಲಿ ಮಧ್ಯಚತುಷ್ಟಿಕಳಾಯುಕ್ತದಿಂ ಕೂಡುವ ಬಣ್ಣಿತೆ ಭಾವರಮ್ಯ ನಯವಪ್ಪುಗೆಯಸುಖದೊಳ್ಮುಳುಗಿದ ಪರಿಣಾಮದ ಕುಶಲವನೇನೆಂಬೆನವ್ವ! ನಿರಹಂಕಾರ ಗೃಹದಲ್ಲಿ ಅಂತಃಚತುಷ್ಟಿಕಳಾಯುಕ್ತದಿಂ ಸಂಯೋಗಿಸುವ ಎಳೆಮೋಹ ಸಮತೆಯ ಸುಖದೊಳ್ಮುಳುಗಿದ ಪರಮಪರಿಣಾಮವನೇನೆಂಬೆನವ್ವ! ಸುಮನಮಂಟಪದಲ್ಲಿ ಮಹಾನುಭಾವ ಚತುಷ್ಟಿಕಳಾಯುಕ್ತದಿಂ ಸಂಯೋಗಿಸುವ ಕಲೆ ಸೋಂಕು ರತಿರಮ್ಯದೊಳ್ಮುಳುಗಿದ ಅತಿಶಯದುನ್ನತಿಯನೇನೆಂಬೆನವ್ವ! ಸುಜ್ಞಾನಮಂದಿರದಲ್ಲಿ ಆನಂದಚತುಷ್ಟಿಕಳಾಯುಕ್ತದಿಂ ನೆರೆವ ಮೆಚ್ಚು ಅಚ್ಚೊತ್ತಿರ್ದವಿರಳ ಪರಿ ಸುಖವನೇನೆಂಬೆನವ್ವ! ಸದ್ಭಾವಾಲಯದಲ್ಲಿ ಸಮರಸಚತುಷ್ಟಿಕಳಾಯುಕ್ತದಿಂ ಸತ್ಕೂಟ ಸನುಮತವೆನಿಸುವ ಅನುಪಮ ಸುಖರತಿಯೊಳ್ಮುಳುಗಿದ ಅಗಣಿತದುನ್ನತಿಯನೇನೆಂಬೆನವ್ವ! ನಿಜಾಲಯದಲ್ಲಿ ನಿತ್ಯನಿಬ್ಬೆರಗು ಪರವಶ ಪರಿಪೂರ್ಣವೆಂಬ ಅಖಂಡ ಚತುಷ್ಟಿಕಳಾಯುಕ್ತದಿಂ ಅಭಿನ್ನಸಂಯೋಗದತಿಶಯದಾನಂದದೊಳ್ಮುಳುಗಿದ ಘನಸುಖದುನ್ನತಿಯ ಗುರುನಿರಂಜನ ಚನ್ನಬಸವಲಿಂಗದೊಳಗೆ ಏನೆಂಬೆನವ್ವ!