Index   ವಚನ - 937    Search  
 
ಅಯ್ಯಾ, ಸೂರ್ಯನು ನಿತ್ಯ ಭೂಪ್ರದಕ್ಷಿಣೆಯಾದರೆ ಅದು ಚೋದ್ಯವಲ್ಲ. ಚಂದ್ರನು ತಾರೆಗಳೊಡವೆರೆದು ತಿಥಿ ವತ್ಸರಾದಿ ಸಕಲವ ನಡಸಿ ಕ್ಷೀಣ ಘನವಾಗಿ ತೋರಿದಡೆಯು ಅದು ಚೋದ್ಯವಲ್ಲ. ಪೃಥ್ವಿ ಅಪ್ಪು ಅಗ್ನಿ ವಾಯು ಆಕಾಶದೊಳಗೆ ತಮ್ಮ ತಮ್ಮ ಪರುಷಪಂಚಕವ ನಿರ್ಮಿಸಿದಡೆಯು ಅದು ಆಶ್ಚರ್ಯವಲ್ಲ. ಮತ್ತಾವುದು ಆಶ್ಚರ್ಯವೆಂದೊಡೆಃ ಗುರುನಿರಂಜನ ಚನ್ನಬಸವಲಿಂಗಾ ನೀವು ನಾಮ ಸೀಮೆಗೆ ತೋರಿ ನಾಮ ನಿರ್ನಾಮ ನಿಸ್ಸೀಮ ನಿರ್ವಯಲಾದುದೇ ಘನಚೋದ್ಯ ಕಾಣಾ