Index   ವಚನ - 1091    Search  
 
ಅಂಗ ಮನ ಪ್ರಾಣ ಹುಸಿಯೆಂಬುದ ಕಂಡೆಯಲ್ಲ ಮೂಗಣ್ಣಿಂದೆ. ಗುಣವರ್ಗ ಊರ್ಮಿ ಭೂತೇಂದ್ರಿಯ ಕರಣವಿಷಯಾದಿ ಸಕಲನಿಃಕಲವೆಲ್ಲ ಹುಸಿಯೆಂಬುದ ಕಂಡೆಯಲ್ಲ ಮೂಗಣ್ಣಿಂದೆ. ತನುತ್ರಯ ಮಲತ್ರಯ ಈಷಣತ್ರಯ ಜೀವತ್ರಯ ಅವಸ್ಥಾತ್ರಯವೆಂಬ ಪಂಚಾದಶ ಮಾಯಾಪಟಲಾದಿ ತಾಮಸವೆಲ್ಲ ಹುಸಿಯೆಂಬುದ ಕಂಡೆಯಲ್ಲ ಮೂಗಣ್ಣಿಂದೆ. ಕಂಡೆ ಕಾಣೆ ಬೇಕು ಬೇಡ ನಾನು ನೀನೆಂಬ ದ್ವಂದ್ವಕರ್ಮದ ಕತ್ತಲೆ ಹುಸಿಯೆಂಬುದ ಕಂಡೆಯಲ್ಲ ಮೂಗಣ್ಣಿಂದೆ. ಇಂತಿವೆಲ್ಲ ಕಂಡ ಕಾಣಿಕೆ ನಿಶ್ಚಯವಾದಲ್ಲಿ ನಿಜ ನಿರ್ವಾಣದ ನಿಲವು ನೀನೆಂಬೆ ಗುರುನಿರಂಜನ ಚನ್ನಬಸವಲಿಂದಲ್ಲಿ.