Index   ವಚನ - 1205    Search  
 
ಶುದ್ಧನಪ್ಪನಯ್ಯಾ ಜಾಗ್ರಸ್ವಪ್ನ ಸುಷುಪ್ತಿಯಲ್ಲಿ ಪರಸ್ತ್ರೀ ಅನ್ಯದೈವಭಕ್ತಿಯ ಬಯಸದವ. ಸಿದ್ಧನಪ್ಪನಯ್ಯಾ ಜಾಗ್ರ ಸ್ವಪ್ನ ಸುಷುಪ್ತಿಯಲ್ಲಿ ಅನ್ಯಧನಕಾಂಕ್ಷೆ ಅವ್ಯಕ್ತಚಿಂತೆಯ ಮಾಡದವ. ಪ್ರಸಿದ್ಧನಪ್ಪನಯ್ಯಾ ಜಾಗ್ರ ಸ್ವಪ್ನ ಸುಷುಪ್ತಿಯಲ್ಲಿ ಷಡುವರ್ಗ ಭಾವವಿಲ್ಲದವ. ಅಶುದ್ಧನಪ್ಪನಯ್ಯಾ ಜಾಗ್ರ ಸ್ವಪ್ನ ಸುಷುಪ್ತಿಯಲ್ಲಿ ನಿಜೋಪಾಧಿಯ ಭಕ್ತಿಯುಳ್ಳಡೆ. ಅಸಿದ್ಧನಪ್ಪನಯ್ಯಾ ಜಾಗ್ರ ಸ್ವಪ್ನ ಸುಷುಪ್ತಿಯಲ್ಲಿ ಸುಪ್ರಸನ್ನಭಕ್ತಿಯುಳ್ಳಡೆ. ಅಪ್ರಸಿದ್ಧನಪ್ಪನಯ್ಯಾ ಜಾಗ್ರ ಸ್ವಪ್ನ ಸುಷುಪ್ತಿಯಲ್ಲಿ ಸಮಯಭಕ್ತಿಯುಳ್ಳಡೆ. ಇದು ಕಾರಣ, ಅಲ್ಲಿಯೇ ಇರಲೊಲ್ಲದಿರ್ದನು ಇಲ್ಲಿಯೆ ಚಲುವಂಗ ಪ್ರಾಣಾತ್ಮಪ್ರಿಯ ಸಿದ್ಧಲಿಂಗ ನೋಡಾ ಅರಿವರು.