Index   ವಚನ - 1    Search  
 
ಅಂಗವೆಂಬ ವಾಕುಳದ ಕುಂಭದಲ್ಲಿ ತೋರಿ ಅಡಗುವ ಮರೀಚಿಕಾ ಜಲವ ತುಂಬಿದಂತೆ. ಚಿತ್ತ ಸಾಳಿವನವೆಂಬ ತಂಡುಲ ತೊಳೆಯದೆ, ಥಳಿಸದೆ, ಕುಂಭದೊಳಗೆ ಹಾಕಿ ವಾಯುವಿನ ಧೂಮ್ರದಿಂದ ಬೇಯಿಸಿ ಅದು ಬೆಂದುದಿಲ್ಲ. ಅದು ಮೂರು ಗುಂಡಿನ ಗುಣದಿಂದ ಗುಂಡಿನ ಚಂದ ತುಂಬಿಹ ಮಡಕೆಯಂತೆ. ಮತ್ತೊಂದರ ಇರವು ತಿರುಗುವ ಚಕ್ರದ ಗೊಂದಣದಂದನ ದ್ವಂದ್ವವ, ಹಿಂಗಿ ನಿಂದ ಕುಂದಿನಿರವು, ಕೂರಲಗಿನ ಬಾಯ ಧಾರೆಯಂತೆ ಉಭಯವ ಕೂಡಿಕೊಂಡು ನಿಂದ ಗುಂಡು. ಇದು ಬೇಯದು, ಮಡಕೆಯನೊಡೆ, ಜಲವ ತಡಹು, ತಂಡುಲವ ಚೆಲ್ಲು, ಮಾರುತನ ಬೆಂಕಿಯ ಕೆಡಿಸು, ಓಗರದೂಟವ ಬಿಡು, ಭವಸಾಗರದ ಸಾಧನೆಯನೆ ಗೈ, ಕಾಹುರದ ಕಮ್ಮಟವ ಪರರುವ ಬೋಧಿಸುವ ರಸನವ ಕೀಳು, ಕಿತ್ತ ಮತ್ತೆ ಇನ್ನರಿ. ಸಕಲೇಂದ್ರಿಯದ ಹುತ್ತದ ಹಾವ ಹಿಡಿ. ಮೊತ್ತದ ಮನೆ ವಿಕಾರದ ಚಿತ್ತದ ಹುಲಿಯ ಮುರಿ. ಭಕ್ತಿಗೆ ಸಹ ಕರ್ತುವ ಚಿತ್ತದಲ್ಲಿ ಅಚ್ಚೊತ್ತಿದಂತಿರು. ಸಚ್ಚಿದಾನಂದ ಹೃದಯಪೂರಿತನಾಗಿ ಬೆಚ್ಚಂತಿರು. ವಿರಳವಿಲ್ಲದೆ ಅವಿರಳನಾಗಿ ಎನಗೊಂದು ತೊಡುಗೆಯಿಲ್ಲ, ನಿನ್ನಡಿಯಲ್ಲಿ ಅಡಗಿದೆನಾಗಿ ನಿನ್ನ ಒಡಗೂಡುವ ಕಡೆಯಾವುದು? ಎನ್ನ ಕಾಯಕದ ಬಿಡುವಾವುದು? ಅಂದಾಡಿದ ಮಾತಿನ ಕಡಿವೆಂಗೆ ಬಂದ ಮೊಡತದ ನಗೆಯ ಕಾಯಕ ಸಂದಿತ್ತು. ನಿನ್ನಯ ಕೂಪಳ ಬಯಲಾಗಿ ಅಜಾತನೆ ಸಲಹು, ಆತುರವೈರಿ ಮಾರೇಶ್ವರಾ.